ಸಿಂಧನೂರು ತಾಲೂಕಿನಲ್ಲಿ ನಡೆದ ಒಂದೇ ಕುಟುಂಬದ 5 ಜನರ ಕೊಲೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನ ಪ್ರಕರಣ ಸಂಬಂಧ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ರಾಯಚೂರು ಜಿಲ್ಲಾ 3ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ವಿಚಾರಣೆ ನಡೆಸಿ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
2020ರ ಜುಲೈ 11 ರಂದು ತನ್ನ ಮಗಳಾದ ಮಂಜುಳಾಳನ್ನು ಮೌನೇಶ ಎಂಬ ಯುವಕ ಪ್ರೀತಿಸಿದ ಎಂಬ ಕಾರಣಕ್ಕೆ ಜಿಲ್ಲೆಯ ಸಿಂಧನೂರು ನಗರದ ಸುಕಾಲಪೇಟೆಯ ಬಡಾವಣೆಯ ಹಿರೇಲಿಂಗೇಶ್ವರ ಕಾಲೊನಿಯಲ್ಲಿ ಯುವಕನ ಮನೆಗೆ ನುಗ್ಗಿ ಆತನ ತಂದೆ ಈರಪ್ಪ, ಈರಪ್ಪನ ಪತ್ನಿ ಸುಮಿತ್ರಮ್ಮ, ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳು ಶ್ರೀದೇವಿ ಅವರನ್ನು ಆರೋಪಿಗಳಾದ ಸಣ್ಣ ಫಕೀರಪ್ಪ ತಂದೆ ಸೋಮಪ್ಪ ಕೊನದವರ, ಅಂಬಣ್ಣ ಸೋಮಪ್ಪ ಕೋನದವರ, ಸೋಮಶೇಖರ ತಂದೆ ಹಿರೇಫಕೀರಪ್ಪ ಸೇರಿಕೊಂಡು ಅಕ್ರಮ ಕೂಟ ರಚಿಸಿ ಬಡಿಗೆಗಳಿಂದ ಹೊಡೆದು 5 ಜನರನ್ನು ಕೊಲೆ ಮಾಡಿದ್ದರು.
ರೇಖಾ, ಗಂಗಮ್ಮ, ದೊಡ್ಡ ಫಕೀರಪ್ಪ, ಸೋಮಪ್ಪ ಕೊನದವರ, ಹನುಮಂತಪ್ಪ, ಸೋಮಪ್ಪ, ಹೋನೂರಪ್ಪ, ಸೋಮಪ್ಪ, ಬಸವಲಿಂಗಪ್ಪ ದೊಡ್ಡ ಫಕೀರಪ್ಪ, ಅಮರೇಶ, ಬಸಬಲಿಂಗಪ್ಪ, ದೊಡ್ಡ ಫಕೀರಪ್ಪ ಅವರು ಕೊಲೆಯಲ್ಲಿ ಭಾಗಿಯಾಗಿದ್ದರು. ಘಟನೆಯಲ್ಲಿ ಈರಪ್ಪನ ಸೊಸೆ ರೇವತಿ ಹಾಗೂ ಮಗಳು ತಾಯಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಗಾಳಿ-ಮಳೆಗೆ ನೆಲಕಚ್ಚಿದ ಸಜ್ಜೆ, ಭತ್ತ; ರೈತರು ಕಂಗಾಲು
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಬಾಲಚಂದ್ರ ಲಖ್ಕಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಸಾಕ್ಷಿ, ದಸ್ತಾವೇಜುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿ ಸಣ್ಣ ಫಕೀರಪ್ಪ, ಅಂಬಣ್ಣ ಸೋಮಶೇಖರ, ಪರಸಪ್ಪ ಹಾಗೂ ಶಿವರಾಜ್ ಅವರಿಗೆ ಗಲ್ಲು ಶಿಕ್ಷೆ ಹಾಗೂ 47 ಸಾವಿರ ರೂಪಾಯಿ ದಂಡ ಹಾಗೂ 9 ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 97,500 ರೂ ದಂಡ ವಿಧಿಸಿದೆ.
ಸರ್ಕಾರದ ಪರವಾಗಿ ಅಭಿಯೋಜನ ಆರ್ ಎ.ಗಡಕರಿ ವಾದ ಮಂಡಿಸಿದ್ದರು. ಮಹಿಳಾ ಪಿ.ಸಿ ಕೆಂಚಮ್ಮ, ಪಿಸಿ ಬೂದೆಪ್ಪ ಸರಿಯಾದ ಸಮಯಕ್ಕೆ ಸಾಕ್ಷಿದಾರರನ್ನುನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಕುರಿತು ಎಸ್ ಪಿ.ಎಂ ಪುಟ್ಟಮಾದಯ್ಯ ಅವರು ಮಾತನಾಡಿ, ಪೊಲೀಸರು ಸಕಾಲಕ್ಕೆ ಸರಿಯಾಗಿ ತನಿಖೆ ನಡೆಸಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರಿಂದ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.