ರಾಯಚೂರು ಜಿಲ್ಲೆಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಅನುಷ್ಠಾನಗೊಳಿಸಲಾಗಿರುವ ವಸತಿ ಯೋಜನೆಗಳ ಪ್ರಗತಿ ನಿರೀಕ್ಷೆಗಿಂತ ಕುಂಠಿತವಾಗಿದ್ದು, ಗಂಭೀರವಾಗಿ ಪರಿಗಣಿಸಿ ಪ್ರಗತಿ ಮಾಡದಿದ್ದರೆ ಸಂಬಂಧಿಸಿದವರೇ ಹೊಣೆಯಾಗಬೇಕಾಗುತ್ತದೆ ಎಂದು ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಪರಶುರಾಮಗೌಡ ಎಚ್ಚರಿಸಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವಸತಿ ಯೋಜನಾವಾರು ಪ್ರಗತಿಯ ಮಾಹಿತಿ ಪಡೆದು ಮಾತನಾಡಿದರು.
“ಪ್ರಧಾನ ಮಂತ್ರಿ ಆವಾಜ಼್ ಯೋಜನೆ(ಪಿಎಂಎವೈ-ನಗರ) ಯೋಜನೆಯಡಿ ಜಿಲ್ಲೆಗೆ 11,543 ಮನೆಗಳು ಮಂಜೂರಾಗಿವೆ. 5,167 ಮನೆಗಳನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗಿದೆ. ಉಳಿದಂತೆ ಜಿಯೋ ಟ್ಯಾಗ್ ಮಾಡುವ ಪ್ರಗತಿಯೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣದ ಕನಸು ಹೊತ್ತಿದ್ದಾರೆ. ಅವರ ಕನಸು ನನಸು ಮಾಡುವ ಕೆಲಸ ನಗರ ಸ್ಥಳೀಯ ಸಂಸ್ಥೆಗಳಿಂದ ಸಮರ್ಪಕವಾಗಿ ನಡೆದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ 1801 ಮನೆಗಳು ಮಂಜೂರಾಗಿದ್ದು, 758 ಮನೆಗಳುಮಾತ್ರ ಪೂರ್ಣಗೊಂಡಿವೆ. 450 ಮನೆಗಳು ಇನ್ನೂ ಪ್ರಾರಂಭವೇ ಆಗಿಲ್ಲ. ಉಳಿದವು ವಿವಿಧ ಹಂತದಲ್ಲಿಯೇ ಉಳಿದಿವೆ. ಮನೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.
“ಸಿಂಧನೂರು ನಗರಸಭೆಗೆ 1641 ಮನೆಗಳು ಮಂಜೂರಾಗಿದ್ದು, 710 ಮನೆಗಳು ಮಾತ್ರ ಪೂರ್ಣಗೊಂಡಿವೆ. 762 ಮನೆಗಳು ಇನ್ನೂ ಪ್ರಾರಂಭವೇ ಆಗಿಲ್ಲ. ಬಹುತೇಕ ಲಿಂಗಸೂಗೂರು, ದೇವದುರ್ಗ, ಮುದುಗಲ್, ಸಿರವಾರಗಳ ಪರಸ್ಥಿತಿಯೂ ಭಿನ್ನವಾಗಿಲ್ಲ. ಅನುದಾನ ಲಭ್ಯತೆಯಿದ್ದರೂ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಿಶೇಷ ಆಧ್ಯತೆಯಾಗಿ ಪರಿಗಣಿಸಿ ಪೂರ್ಣಗೊಳಿಸಬೇಕು” ಎಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪ್ರಕಾಶ ವಡ್ಡರ ಮಾತನಾಡಿ, “2018ರ ದತ್ತಾಂಶದ ಆಧಾರದ ಮೇಲೆ ಮನೆಗಳನ್ನು ಮಂಜೂರು ಮಾಡಲಾಗಿದೆ. ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿದ್ದರೂ ಮನೆಗಳ ನಿರ್ಮಾಣ ಮಾತ್ರ ನಡೆಯುತ್ತಿಲ್ಲ. ವಿಳಂಬವಾದಲ್ಲಿ ಅನುದಾನ ಬಳಕೆ ಸಾಧ್ಯವಾಗುವದಿಲ್ಲ. ಕೂಡಲೇ ಸಂಬಂಧಿಸಿದವರು ಹೆಚ್ಚು ಒತ್ತು ನೀಡಬೇಕು” ಎಂದರು.
ಪಾಲುದಾರಿಕೆಯಲ್ಲಿ ಮನೆಗಳ ನಿರ್ಮಾಣ ಯೋಜನೆ(ಪಿಎಂಎವೈ-ಚ್‌ಪಿ)ಯೋಜನೆ ಅಡಿಯಲ್ಲಿಯೂ ಪ್ರಗತಿ ಕುಂಠಿತವಾಗಿದೆ. ರಾಯಚೂರು ಮತ್ತು ಸಿಂಧನೂರು ನಗರಸಭೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ 8489 ಮನೆಗಳು ಮಂಜೂರು ಮಾಡಲಾಗಿದೆ. ಆದರೆ ಕೇವಲ 2765 ಮನೆಗಳು ಮಾತ್ರ ಪೂರ್ಣಗೊಂಡಿವೆ. 3570ರಷ್ಟು ಮನೆಗಳು ಇನ್ನೂ ಪ್ರಾರಂಭವಾಗಿಲ್ಲ. ಇಷ್ಟೊಂದು ನಿರ್ಲಕ್ಷ್ಯದಿಂದ ನಗರ ಪ್ರದೇಶದ ಜನರಿಗೆ ವಸತಿ ಯೋಜನೆಗಳು ತಲುಪದಂತಾಗಿದೆ. ಕೂಡಲೇ ಸಂಬಂಧಿಸಿದವರು ಕಾಲಮಿತಿಯಲ್ಲಿ ಅನುದಾನ ಬಳಕೆ, ಗುಣಮಟ್ಟದ ಮನೆ ನಿರ್ಮಾಣಕ್ಕೆ ಒತ್ತು ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕರ್ನಾಟಕ ಪೊಲೀಸ್ ದೇಶದಲ್ಲಿಯೇ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯ ಹೊಂದಿದೆ: ಗೃಹ ಸಚಿವ
ಸಭೆಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕ ದತ್ತಾತ್ರೇಯ ವಿ ಸಿಂಧಗಿ, ಯೋಜನಾಧಿಕಾರಿ ಪ್ರಕಾಶ ವಡ್ಡರ, ನಗರಾಭಿವೃದ್ದಿ ಯೋಜನಾ ಅಧಿಕಾರಿ ಸೇರಿದಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು, ತಾಂತ್ರಿಕ ಸಿಬ್ಬಂದಿಗಳು ಇದ್ದರು.
ವರದಿ : ಹಫೀಜುಲ್ಲ