ರಾಜ್ಯದ ಮಹತ್ವಾಕಾಂಕ್ಷೆ ಜಿಲ್ಲೆಯೆಂದು ಗುರುತಿಸಿಕೊಂಡಿರುವ ರಾಯಚೂರಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ನಿರೀಕ್ಷಿತ ಗುರಿ ತಲುಪಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಕೇಂದ್ರ ಹಣಕಾಸು ಮಂತ್ರಾಲಯದ ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, “ಆರ್ಥಿಕ ಮತ್ತು ಕೌಶಲ್ಯಾಭಿವಧ್ದಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನಿಗದಿತ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗಿಲ್ಲ. ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಒದಗಿಸುವ ಪ್ರಗತಿಯಲ್ಲಿ ಶೇ.50 ಸಾಧನೆ ಕಂಡು ಬಂದಿಲ್ಲ. 2018 ರಿಂದ ಪ್ರತಿವರ್ಷ ಹೆಚ್ಚು ಫಲಾನುಭವಿಗಳಿಗೆ ತಲುಪದೇ ಹಾಗೂ ಜಿಲ್ಲೆಯ 15 ರಿಂದ 29 ವಯೋಮಾನದ ಯುವಕ ಯುವತಿಯರಿಗೆ ತರಬೇತಿ ಹಾಗೂ ಅಲ್ಪಾವಾಧಿ ಮತ್ತು ದೀರ್ಘಾವಧಿ ತರಬೇತಿಯಲ್ಲಿ ನಿರೀಕ್ಷೆಯಂತೆ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಕೂಡಲೇ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
“ಜಿಲ್ಲೆಯಲ್ಲಿ ಎರಡು ನದಿಗಳಿದ್ದು ಕೆಳ ಭಾಗದ ರೈತರಿಗೆ ನೀರು ತಲುಪಿಸುವ ಪ್ರಕ್ರಿಯೆ ನಡೆಯಬೇಕು. ಕೃಷಿ ಮತ್ತು ಜಲಸಂಪನ್ಮೂಲ ಯೋಜನೆಯಡಿ ಸಣ್ಣ ನೀರಾವರಿ, ಮಣ್ಣು ಪರೀಕ್ಷೆಗಳನ್ನು ಹೆಚ್ಚಿಸಬೇಕು. ಬಡ ಜನರಿಗೆ ಕಚ್ಚಾ ಮನೆಗಳನ್ನು ನಿರ್ಮಾಣ ವ್ಯವಸ್ಥೆಯನ್ನು ತೀವ್ರಗೊಳಿಸಬೇಕೆಂದರು. ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲಾಖೆ ಅಧಿಕಾರಿಗಳೇ ಖಾತ್ರಿಪಡಿಸಿಕೊಳ್ಳಬೇಕು” ಎಂದು ಸೂಚಿಸಿದರು.
ಮೂಲಭೂತ ಸೌಕರ್ಯ, ಆರ್ಥಿಕ ಅಭಿವೃದ್ದಿ, ಶಿಕ್ಷಣ ಮತ್ತು ಆರೋಗ್ಯ ವಲಯದ ಸೂಚ್ಯಂಕ ಗುರಿಯಗಳನ್ನು ತಲುಪಲು ನಿರಂತರ ಮೇಲುಸ್ತುವಾರಿ ಅವಶ್ಯಕತೆಯಿದೆ. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರುಗಳು ನಿಗಾವಹಿಸುವ ಜೊತೆಗೆ ಪ್ರಗತಿಯನ್ನು ದಾಖಲಿಸಬೇಕು. ಸೂಚ್ಯಂಕಗಳ ಗುರಿಯಂತೆ ಅನೇಕ ವಲಯಗಳಲ್ಲಿ ಪ್ರಗತಿ ಕುಂಠಿತವಾಗಿದ್ದು ಪ್ರತಿಶತ ಗುರಿ ಸಾಧನೆಗೆ ಆದ್ಯತೆಯಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಬೊಲೆರೋ ವಾಹನ ಪಲ್ಟಿ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
