ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾ ಶಾಖೆ ಚುನಾವಣೆ ಡಿಸೆಂಬರ್ 04ರಂದು ನಡೆಯಲಿದ್ದು, ಸರ್ಕಾರಿ ನೌಕರರು ಮತ ಚಲಾಯಿಸಬೇಕು ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಆಂಜನೇಯ ಕೆ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “2024-26ನೇ ಸಾಲಿನ ಅವಧಿಗೆ ಜಿಲ್ಲಾ ಶಾಖೆಯ ಮೊದಲ ಹಂತದಲ್ಲಿ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ಇದೀಗ ಜಿಲ್ಲಾದ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ಡಿಸೆಂಬರ್ 4ರಂದು ನಡೆಯಲಿದೆ” ಎಂದರು.
“ಅಧ್ಯಕ್ಷ ಸ್ಥಾನಕ್ಕೆ ಆಂಜನೇಯ ಕೆ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ವೆಂಕಟೇಶ ಡಿ ಹಾಗೂ ಖಜಾಂಚಿ ಸ್ಥಾನಕ್ಕೆ ರಾಜಶೇಖರ ಅವರು ಸ್ಪರ್ಧಿಸಿದ್ದಾರೆ. ಸಮಾನ ಮನಸ್ಕ ನೌಕರರ ಹಿತ ಪಡೆಯಿಂದ ಸ್ಪರ್ಧಿಸಿದವರಿಗೆ ತಮ್ಮ ಮತ ಚಲಾಯಿಸಬೇಕು” ಎಂದು ಹೇಳಿದರು.
“ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ಸೇರಿದಂತೆ ಅನೇಕ ಬೇಡಿಕೆಗಳು ಕುರಿತು ಪ್ರಣಾಳಿಕೆಯಲ್ಲಿವೆ. ಭ್ರಷ್ಟಾಚಾರ ರಹಿತ, ನಿಸ್ವಾರ್ಥ ಆಡಳಿತ ನೀಡುವ ರಾಜ್ಯದಲ್ಲಿ ಏಕೈಕ ಸಂಘವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೆ ಶಾಲಾ ಮಕ್ಕಳ ಪರದಾಟ; ರಸ್ತೆ ತಡೆದು ಪ್ರತಿಭಟನೆ
“ಎನ್‌ಪಿಎಸ್ ಕೈಬಿಡಲು ಹೋರಾಟ ತೀವ್ರಗೊಳಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ, ಒಪಿಎಸ್ ಜಾರಿಗೊಳಿಸಲು ಹೋರಾಟ ನಡೆಸುವುದು, ನೌಕರರಿಗೆ ಅನುಗುಣವಾಗುವ ನೌಕರರ ಭವನ ನಿರ್ಮಾಣ, ವಾಣಿಜ್ಯ ಮಳಿಗೆ, ವಸತಿ ಗೃಹ ನಿರ್ಮಾಣಕ್ಕೆ ಒತ್ತು ನೀಡುವುದಾಗಿದೆ” ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ಡಿ, ರಾಜಶೇಖರ, ವೀರಭದ್ರಪ್ಪ, ರಾಘವೇಂದ್ರ, ಚಾಮರಾಜ ಸೇರಿದಂತೆ ಇತರರು ಇದ್ದರು.
