ರಾಯಚೂರು ನಗರದ ಮಡ್ಡಿಪೇಟೆ ಬಡಾವಣೆಯಲ್ಲಿ ಬೀದಿನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪೋಷಕರು ಆತಂಕದಲ್ಲಿದ್ದಾರೆ.
ನಗರದ ವಾರ್ಡ್ ನಂ.23ರ ಮಡ್ಡಿಪೇಟೆ ಬಡಾವಣೆಯ ಲಕ್ಷ್ಮಣ ಸ್ವಾಮಿ ಮಠದ ಹಿಂದೆ ಬೀದಿನಾಯಿ ಯುವಮತಿಯ ಮೇಲೆ ದಾಳಿ ಮಾಡಿದಾಗ ಕೆಳಗ್ಗೆ ಬಿದ್ದ ಯುವತಿ ಗಂಭೀರ ಗಾಯಗೊಂಡಿದ್ದು, ಇದೀಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಡಿಸೆಂಬರ್ 7ರ ಬೆಳಿಗ್ಗೆ ಮನೆಯ ಮುಂದೆ ಯುವತಿ ನಿಂತಿದ್ದಾಗ ಬೀದಿ ನಾಯಿಗಳ ದಂಡು ಯುವತಿಯ ಮೇಲೆ ದಾಳಿ ಮಾಡಿದೆ. ಯುವತಿ ಕೂಡಲೇ ಕೆಳಗೆ ಬಿದ್ದ ಕಾರಣ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ನಂತರ ತಂದೆ ತಾಯಿ ಯುವತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆಯಾದರೂ ಯುವತಿಗೆ ಎಚ್ಚರವಾಗದ ಕಾರಣ ಅಂದು ಸಂಜೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
“ರಿಮ್ಸ್ ಆಸ್ಪತ್ರೆ ವೈದ್ಯರು ಯುವತಿಗೆ ಚಿಕಿತ್ಸೆ ನೀಡಿದ್ದು, ತಲೆಗೆ ಪೆಟ್ಟು ಬಿದ್ದಿರುವ ಕಾರಣ ರಕ್ತ ಹೆಪ್ಪುಗಟ್ಟಿದೆ. ಹಾಗಾಗಿ ಯುವತಿ ಕೋಮಾಗೆ ಹೋಗಿದ್ದಾರೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದಾರೆ. ಯುವತಿಯನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ಒಂದು ದಿನ ಚಿಕಿತ್ಸೆ ನೀಡಿ ಸುಧಾರಿಸದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಬೆಂಗಳೂರುನಲ್ಲಿ ಚಿಕಿತ್ಸೆ ಕೊಡಿಸಲು ಆರ್ಥಿಕ ವ್ಯವಸ್ಥೆ ಇಲ್ಲದ ಕಾರಣ ಪುನಃ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದೇವೆ” ಎಂದು ಯುವತಿಯ ಪಾಲಕರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಲೆಮಾರಿಗಳಿಗೆ ಸೂರು ಕಲ್ಪಿಸಲು ಆಗ್ರಹ
“ಯುವತಿ ಬದುಕುವುದು ಕಷ್ಟ. ಏನಾದರೂ ಹೆಚ್ಚು ಕಡಿಮೆಯಾದರೆ ನಮ್ಮ ಮೇಲೆ ಆರೋಪ ಮಾಡಬೇಡಿ, ಅವಳ ಸಾವಿಗೆ ನಾವು ಕಾರಣರಲ್ಲವೆಂದು ಆಸ್ಪತ್ರೆ ವೈದ್ಯರು ಪತ್ರ ಬರೆಸಿಕೊಂಡು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದಾರೆ” ಎಂದು ನೋವು ತೋಡಿಕೊಂಡರು.
“ನಗರದ ಕೆಲವು ದಿನ ಹಿಂದೆಯೂ ಮೂವರು ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದವು. ಬೀದಿನಾಯಿಗಳ ಹಾವಳಿ ಮೀತಿ ಮೀರಿದ್ದು, ನಿಯಂತ್ರಿಸಬೇಕಾದ ನಗರಸಭೆ ಕಣ್ಣುಮುಚ್ಚಿ ಕುಳಿತಿದೆ” ಎಂದು ಸಾರ್ವಜನಿಕರು ಆರೋಪಿಸಿದರು.
