ಸಿಂಧನೂರು ನಗರದಲ್ಲಿ ಎಂಎಸ್‌ಸಿ ವಿದ್ಯಾರ್ಥಿನಿ ಶಿಫಾಳನ್ನು ಹತ್ಯೆಗೈದ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ರಾಯಚೂರಿನ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್‌ಐಒ) ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ಯುವತಿಯರು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿರುವ ಸಂದರ್ಭದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗಾತಿಯಾಗಿದೆ. ಕೂಡಲೇ ಇಂತಹ ಘಟನೆಗಳು ಮರು ಕಳಿಸದಂತೆ ಕಠಿಣ ಕ್ರಮ ವಹಿಸಬೇಕು. ಫಾಸ್ಟ್ರಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿತು.
“ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಮತ್ತು ಪ್ರೀತಿಯ ನೆಪದಲ್ಲಿ ಕೊಲೆಗಳು ನಡೆಯುತ್ತಿರುವುದು ಭಯದ ವಾತಾವರಣ ಸೃಷ್ಟಿ ಮಾಡಿದೆ. ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲು ಹತ್ತಲು ಹತ್ತಾರು ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ಪೋಷಕರ ಮಾನಸಿಕ ಧೈರ್ಯವನ್ನು ಕುಸಿಯುವಂತೆ ಮಾಡುತ್ತವೆ. ಸಂಬಂಧಪಟ್ಟ ಇಲಾಖೆ ಕೂಡಲೇ ಇಂತಹ ಕುಕೃತ್ಯಗಳು ನಡೆಯದಂತೆ ಕ್ರಮವಹಿಸಬೇಕು” ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
“ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿ ಹಲವು ಶಾಲಾ-ಕಾಲೇಜುಗಳಿದ್ದು, ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚಿದೆ. ಶಾಲೆ, ಕಾಲೇಜು ಬಿಟ್ಟ ಬಳಿಕ ಹಲವಾರು ಹುಡುಗರು ಬೈಕ್‌ನಿಂದ ಅವರನ್ನು ಹಿಂಬಾಲಿಸುವುದು ಮತ್ತು ಅವರನ್ನು ಚುಡಾಯಿಸುವುದು ಕಂಡು ಬರುತ್ತಿದೆ. ಕ್ಯಾಂಪಸ್ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಲ್ಲದ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ಪೊಲೀಸ್ ಇಲಾಖೆ ವಿಶೇಷ ಗಸ್ತಿಗೆ ವ್ಯವಸ್ಥೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕುಡುಕರ ಅಡ್ಡವಾದ ಇಂದಿರಾ ಕ್ಯಾಂಟಿನ್; ದೊರೆಯುವುದೇ ಉದ್ಘಾಟನೆ ಭಾಗ್ಯ?
ಈ ವೇಳೆ ಅಮ್ಜದ್ ಅಲಿ, ಇಮ್ತಿಯಾಜ್, ರಿಯಾಝ್, ಶೇಖ್ ಅಫ್ರಿದಿ, ಅಬ್ದುಲ್ ಕರೀಂ, ಆಲಂ ಹಾಗೂ ಇನ್ನಿತರರು ಹಾಜರಿದ್ದರು.
