ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು.
ಮಾನ್ವಿ ನಗರದಲ್ಲಿ ಪ್ರತಭಟಿಸಿದ ಬಳಿಕ ಸಂಘಟನಾಕಾರರು ರಾಯಚೂರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
“ಬಾಲಕಿಯು ಪೋತ್ನಾಳ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಳು. ಆರೋಪಿ ಶಿವನಗೌಡ, ಪಾಲಕರು ವಿದ್ಯಾರ್ಥಿನಿಯನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದಾರೆಂದು ಹೇಳಿ ಬಾಲಕಿಯನ್ನು ಪುಸಲಾಯಿಸಿ ಶಾಲೆಯಿಂದ ಕರೆದುಕೊಂಡು ಹೋಗಿದ್ದು, ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಂತಹ ಕ್ರೂರಿಯ ವಿರುದ್ಧ ಕಠಿಣ ಕ್ರಮ ಜರುಗಿಸಿ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
“ಈ ಕೃತ್ಯದಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಶಾಲೆ ಕಾಲೇಜುಗಳಿಂದ ಮಕ್ಕಳು ಮನೆಗೆ ಬರುವವರೆಗೂ ಪೋಷಕರು ಚಿಂತೆಯಲ್ಲಿ ಮುಳುಗುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ, ಬಾಲಕಿಯರ ಮೇಲೆ ಹಾಗೂ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗಳು, ಕೊಲೆ, ಸುಲಿಗೆ, ದೌರ್ಜನ್ಯ ಪ್ರಕರಣಗಳು ಮಿತಿಮೀರಿ ನಡೆಯುತ್ತಿವೆ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಗತಿಸಿದರೂ ಕೂಡಾ ಈ ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಬಳಿ ನಿರ್ಮಾಣವಾಗುವುದೇ ಇಂದಿರಾ ಕ್ಯಾಂಟಿನ್?
“ಪುರುಷ ಪ್ರಧಾನ ಮಹಿಳೆಯನ್ನು ಗುಲಾಮಳನ್ನಾಗಿ ನಡೆಸಿಕೊಳ್ಳುತ್ತ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಸಂಪ್ರದಾಯವನ್ನು ಮುಂದುವರಿಸಿಕೊಂಡೇ ಬರಲಾಗುತ್ತಿದೆ” ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಬುಧವಾರ ಸಂಜೆ ಸಮಯಕ್ಕೆ ಸರಿಯಾಗಿ ಪೋಷಕರ ಜತೆಗೆ ವಿದ್ಯಾರ್ಥಿಗಳನ್ನು ಕಳುಹಿಸಬೇಕಾಗಿದ್ದ ಶಾಲೆಯ ಮುಖ್ಯಸ್ಥರು, ವಿದ್ಯಾರ್ಥಿನಿಗೆ ಅಪರಿಚಿತವಾಗಿರುವಂತಹ ಶಿವನಗೌಡ ಎಂಬುವವರ ಜತೆಗೆ ಬಾಲಕಿಯನ್ನು ಕಳಿಸಿದ್ದಾರೆ. ಆದ್ದರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ನೀಚ ಕಾಮುಕರಿಗೆ ಕಠಿಣ ಶಿಕ್ಷೆಯನ್ನು ನೀಡಿ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಪೋತ್ನಾಳ ಗ್ರಾಮದ ವಿದ್ಯಾಭಾರತಿ ಶಾಲೆಯ ಮುಖ್ಯಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಆ ಶಾಲೆಯ ಪರವಾನಗಿಯನ್ನೂ ಕೂಡ ರದ್ದು ಮಾಡಬೇಕು ಹಾಗೂ ಸಂತ್ರಸ್ತೆ ಬಾಲಕಿಗೆ ಸೂಕ್ತ ಪರಿಹಾರ ನೀಡಿ ವಿದ್ಯಾರ್ಥಿನಿಯರ ರಕ್ಷಣೆಗೆ ವಿಶೇಷ ಕಾಯಿದೆ ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಸಂತಾನ್, ಪಾಲರಾಜ, ಶಾಲೆಯ ಮಕ್ಕಳು ಸೇರಿದಂತೆ ಇತರರು ಇದ್ದರು.
