ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ನ ಅವ್ಯವಸ್ಥೆ ವಿರುದ್ಧ ಏಕಾಏಕಿ ಪ್ರತಿಭಟನೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರ ತಾಲೂಕಿನಲ್ಲಿ ನಡೆದಿದೆ.
ಬೆಳಗಿನ ಉಪಹಾರ ಸೇವಿಸದೆ ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಿಂತು, “ಹಾಸ್ಟೆಲ್‌ನಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಆಗ್ರಹಿಸಿದರು.
“ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಮಲಗುವುದಕ್ಕೆ ಬೆಡ್ ವ್ಯವಸ್ಥೆ ಇಲ್ಲ. ಕೆಲವು ಕೊಠಡಿಗಳ ಬಾಗಿಲುಗಳು ಮುರಿದಿವೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ” ಎಂದು ಆರೋಪಿಸಿದರು.
ವಿದ್ಯಾರ್ಥಿಗಳೊಂದಿಗೆ ಕೆಲವು ಸಂಘಟನೆಗಳು ಜೊತೆಗೂಡಿ ಕೆಲವು ಹೊತ್ತು ಪ್ರತಿಭಟನೆ ನಡಿಸಿದರು. ಬಳಿಕ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿದ್ದ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಮತ್ತು ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೊರಗುತ್ತಿಗೆ ಕಾರ್ಮಿಕರನ್ನು ನಿರುದ್ಯೋಗಿಗಳಾಗಿ ಮಾಡುವ ಹುನ್ನಾರ; ಆರೋಪ
ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳಿದ ಶಾಸಕರು, ವಾರ್ಡನ್ ಮತ್ತು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು. ವಿದ್ಯಾರ್ಥಿಗಳ ಮುಖ್ಯ ಬೇಡಿಕೆಗಳಾದ ಶೌಚಾಲಯದ ಸಮಸ್ಯೆ, ಸಿಬ್ಬಂದಿ ಸಮಸ್ಯೆ, ಊಟದ ಸಮಸ್ಯೆ, ಬೆಡ್ಡಿನ ಸಮಸ್ಯೆ, ಸ್ವಚ್ಛತೆ ಇಲ್ಲದಿರುವುದು, ಹೊಸ ಬಿಲ್ಡಿಂಗ್ ಆದರೂ ಕಿಡಕಿ ಗಾಜುಗಳು ಒಡೆದಿರುವುದು, ಒಂದು ರೂಮಿಗೂ ಬಾಗಿಲು ಇಲ್ಲದಿರುವುದು ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಶಾಸಕರೇ ಅಧಿಕಾರಿಗಳಿಗೆ ತಿಳಿಸಿದ್ದು, 15 ದಿನಗಳ ಒಳಗೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸೂಚಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘದ ಮುಖಂಡ ಚಾಂದಪಾಶ, ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ ತಾಲೂಕು ಮುಖಂಡ ನೂರ್ ಮಹಮದ್, ಉಮೇಶ್ ಹರಳಹಳ್ಳಿ, ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.