ವಸತಿನಿಲಯದಲ್ಲಿ ಊಟ ಸೇವಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಸುಮಾರು 31 ಮಂದಿ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ವಿಷಪೂರಿತವಾಗಿರುವ ಆಹಾರ ನೀಡಿರುವುದು ಮತ್ತು ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಬಿದ್ದಿದ್ದೇ ವಿದ್ಯಾರ್ಥಿಗಳ ಅಸ್ವಸ್ಥತೆಗೆ ಕಾರಣ ಎನ್ನಲಾಗಿದೆ.
ಮೊರಾರ್ಜಿ ಶಾಲೆಯಲ್ಲಿ ಎಂದಿನಂತೆ ಶನಿವಾರ ರಾತ್ರಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಊಟ ನೀಡಲಾಗಿದೆ. ಊಟ ಮಾಡಿದ ಕೇವಲ ಅರ್ಧ ಗಂಟೆ ಬಳಿಕ ಹೊಟ್ಟೆ ನೋವು, ವಾಂತಿಬೇಧಿ ಶುರುವಾಗಿದೆ. ವಿದ್ಯಾರ್ಥಿಗಳ ನರಳಾಟ ಶುರುವಾಗುತ್ತಲೇ ತಕ್ಷಣವೇ ಮೇಲಾಧಿಕಾರಿಗಳಿಗೆ ವಾರ್ಡನ್ ಸುನೀತಾ ಮಾಹಿತಿ ನೀಡಿದ್ದಾರೆ. ಅಲ್ಲಿಂದ 108 ವಾಹನ ಸೇರಿದಂತೆ ಖಾಸಗಿ ವಾಹನಗಳನ್ನು ತೆಗೆದುಕೊಂಡು ಮಾನವಿ ನಗರದ ಮಕ್ಕಳ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತೀವ್ರ ಅಸ್ವಸ್ಥಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಲೇ ತಹಶೀಲ್ದಾರ್ ರಾಜು ಪಿರಂಗಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿ ಬನದೇಶ್ವರ ಭೇಟಿ ನೀಡಿ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿಗಳನ್ನು ಮಾದರಿಗೆ ತೆಗಿದುಕೊಂಡು ಪ್ರಯೋಗಲಕ್ಕೆ ಕಳಿಸಿಕೊಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಐಎಎಸ್ ಅಧಿಕಾರಿ ವಿ ರಶ್ಮಿ ಮಹೇಶ್ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ
ಸುದ್ದಿ ತಿಳಿಯುತ್ತಲೇ ದುಃಖದಿಂದ ತಮ್ಮ ಮಕ್ಕಳ ಹತ್ತಿರಕ್ಕೆ ಧಾವಿಸಿದ ಪೋಷಕರು ಜಿಲ್ಲಾ ಕೋ-ಆರ್ಡಿನೇಟರ್ ಅಮರೇಶ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ತರಾಟೆಗೆ ತೆಗುದುಕೊಂಡಿದ್ದು, ಶಾಲೆಯ ಮುಖ್ಯ ಶಿಕ್ಷಕರು ಮತ್ತು ವಾರ್ಡನ್ ಅವರನ್ನು ಕೂಡಲೇ ಅಮಾನತು ಮಾಡುವಂತೆ ತೀವ್ರವಾಗಿ ಅಗ್ರಹಿಸಿದರು.