ಬಡ ಜನರು ಮೂಢನಂಬಿಕೆಯಿಂದ ಹಾಳಾಗುತ್ತಿದ್ದಾರೆ. ಜಗತ್ತಿನಲ್ಲಿ ಮೂಢನಂಬಿಕೆ ಹೋಗಲಾಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಾಗೂ ವೈಚಾರಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
“ಜನರಲ್ಲಿರುವ ಮೌಢ್ಯತೆ ಹೋಗಲಾಡಿಸುವ ಕನಸು ಕಂಡಿದ್ದೆ. ಇಂದು ಬಹುತೇಕರು ಸೇರಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ. ಇಂತಹ ಸಮ್ಮೇಳನಕ್ಕೆ ವೈಯಕ್ತಿಕವಾಗಿ ₹25 ಲಕ್ಷ ಅನುದಾನ ನೀಡಲಾಗುವುದು” ಎಂದು ಘೋಷಿಸಿದರು.
“ಸರ್ಕಾರ 20 ಲಕ್ಷ ರೂ ಅನುದಾನ ನೀಡಿದೆ. ಆದರೆ ವಿಜ್ಞಾನ ಗ್ರಾಮ ನಿರ್ಮಾಣ ಮಾಡಲು ಸರ್ಕಾರ 5ಕೋಟಿ ರೂ. ಅನುದಾನ ನೀಡಿದೆ. ವೈಜ್ಞಾನಿಕತೆ ಬೆಳೆಸಲು ಪ್ರೋತ್ಸಾಹಿಸುವ, ವಿಮರ್ಶಿಸುವ ಕೆಲಸವಾಗಬೇಕಿದೆ. ಮಕ್ಕಳು, ಯುವಕರು ಪ್ರತಿ ಹಂತದಲ್ಲಿ ಮೌಢ್ಯತೆಯನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ನಂಬಿಕೆಗಳು ಏನೇ ಇದ್ದರೂ ಸರಿತಪ್ಪು ವಿಮರ್ಶಿಸುವ ಕೆಲಸವಾಗಬೇಕಿದೆ. ಇಂತಹ ಸಮ್ಮೇಳನಗಳು, ಹೊಸ ಆಲೋಚನೆಗಳು, ಚಿಂತನೆ ಹೆಚ್ಚುವಂತಾಗಬೇಕು” ಎಂದು ಹೇಳಿದರು.
“ವಿಜ್ಞಾನ ಗ್ರಾಮದ ಮುನ್ನೋಟ ಕುರಿತು ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಡಾ ಎ ಎಸ್ ಕಿರಣಕುಮಾರ್ ಮಾತನಾಡಿ, “ದೇಶದಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಉಪಗ್ರಹ ಆಧಾರಿತ ಮಾಹಿತಿ ಸಂವಹನದಿಂದ ಕ್ರಾಂತಿಕಾರಿ ಬದಲಾವಣೆಗೆ ಸಹಕಾರಿಯಾಗಲಿದೆ” ಎಂದರು.
“ಚಂದ್ರನ ಮೇಲೆ ವಿಕ್ರಮ ಲ್ಯಾಂಡ್ ಆಗಿ ಚಂದ್ರನ ಮೇಲ್ಮನ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದು ಜಗತ್ತೇ ದೇಶದತ್ತ ನೋಡುವಂತಾಗಿದೆ. ಉಪಗ್ರಹಗಳ ಉಡಾವಣೆಯಲ್ಲಿ ದೇಶ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ. ಭವಿಷ್ಯದಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ ಮತ್ತಷ್ಟು ಸಂಶೋಧನೆಗಳ, ಪರಿಹಾರ ಕಂಡಕೊಳ್ಳಲು ವಾರಿಯಾಗುತ್ತದೆ. ವೈಜ್ಞಾನಿಕ ಮನೋಭಾವದಿಂದ ಮಾತ್ರ ವಿಜ್ಞಾನ ಕೌತುಕಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
“ಅಬ್ದುಲ್ ಕಲಾಂ ಕಂಡ ಕನಸು ನನಸು ಮಾಡಬೇಕಾಗಿದೆ. ರಾತ್ರಿಯಲ್ಲಿ ಕಾಣುವ ಕನಸುಗಳಂತೆ ಚಂದ್ರನಲ್ಲಿ ನಡೆಯುವ ಬೆಳವಣಿಗೆಗಳ ಮಾಹಿತಿ ದೊರೆಯುವುದರಿಂದ ಕುತೂಹಲದೊಂದಿಗೆ ಹತ್ತಿರದಿಂದ ಗಮನಿಸಬಹುದಾಗುತ್ತದೆ. ಆಸಕ್ತಿಯೇ ಬದಲಾವಣೆಗೆ ಕಾರಣವಾಗುತ್ತದೆ. ವಿಜ್ಞಾನ ಮೌಢ್ಯತೆಯನ್ನು ದೂರ ಮಾಡಲು ಸಾಧ್ಯವಾಗಲಿದೆ. ಹುಲಿಕಲ್ ನಟರಾಜ್ ವಿನೂತನ ಪ್ರಯತ್ನ ನಡೆಸುತ್ತಿದ್ದು, ಅವರಿಗೆ ಬೆಂಬಲಿಸಲಾಗುವುದು” ಎಂದು ಹೇಳಿದರು.
ಶಾಸಕ ಮಾನಪ್ಪ ವಜ್ಜಲ ಮಾತನಾಡಿ, “ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಇಂತಹ ಸಮ್ಮೇಳನದಿಂದ ಮಾತ್ರ ಸಾಧ್ಯವಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಮೌಢ್ಯತೆ ಮನೆ ಮಾಡಿದೆ. ಆದರೆ, ಹುಲಿಕಲ್ ನಟರಾಜ್ ಅವರು ಮೌಢ್ಯತೆ ನಿವಾರಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ” ಎಂದರು.
“ಲಿಂಗಸೂಗೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ₹20 ಲಕ್ಷ ಅನುದಾನ ನೀಡಿರುವುದು ಅಭಿನಂದನೀಯ, ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಡಾ.ಹುಲಿಕಲ್ ನಟರಾಜ್ ಸುಮಾರು 9,000ಕ್ಕಿಂತ ಹೆಚ್ಚು ಮೂಢನಂಬಿಕೆಗಳನ್ನು ಬಯಲು ಮಾಡಿದ ಕೀರ್ತಿ ಇವರಿಗೆ ಸಲುತ್ತದೆ. ಸರ್ಕಾರದಿಂದ ಇಂತಹ ವ್ಯಕ್ತಿಗಳಿಗೆ ಸರ್ಕಾರದಿಂದ ಪ್ರಶಸ್ತಿ ನೀಡಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೀವಮಾನ ಸಾಧನೆಗೈದ ಮಾಜಿ ಸಚಿವ ಬಿ ಟಿ ಲಲಿತನಾಯಕ, ಹೋರಾಟಗಾರ ಆರ್ ಮಾನಸಯ್ಯ, ಚೇತನರಾರಿ, ಆಕ್ಕೈ ಪದ್ಮಶಾಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಾನವಿಯತೆಯೇ ನಿಜವಾದ ಧರ್ಮ: ಅಪರ ಜಿಲ್ಲಾಧಿಕಾರಿ
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು, ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಡಿ ಎಸ್ ಹುಲಿಗಳು, ಎಡಿಸಿ ಮುರಗೇಶ, ಸಹಾಯಕ ಆಯುಕ್ತ ರಾಹುಲ, ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ಜಿಲ್ಲಾಧ್ಯಕ್ಷ ಚಿರಂಜೀವಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ಶಿವರಾಜ ಹರವಿ, ಮಾನವ ಬಂಧುತ್ವ ವೇದಿಕೆ ತಾಲೂಕು ಸಮಿತಿ ಲಾಲ್ ಪೀರ್, ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಚಿತ್ರನಾಳ ಸೇರಿದಂತೆ ಇತರರು ಇದ್ದರು.