ಮನೆಯ ಬಾಡಿಗೆ ಕೇಳಿದ್ದಕ್ಕೆ ಬಾಡಿಗೆದಾರನೊಬ್ಬ ಮನೆಯ ಮಾಲೀಕಳನ್ನೇ ಹತ್ಯೆ ಮಾಡಿರುವ ಘಟನೆ ರಾಯಚೂರು ನಗರದ ಉದಯ ನಗರದಲ್ಲಿ ನಡೆದಿದೆ.
ಶೋಭಾ ಪಾಟೀಲ (63) ಎನ್ನುವವರೇ ಬಾಡಿಗೆದಾರನಿಂದ ಹತ್ಯೆ ಆಗಿರುವ ದುರ್ದೈವಿ. ಮನೆ ಬಿಡುವಂತೆ ಹೇಳಿದ ಮನೆ ಮಾಲೀಕಳನ್ನೇ ಹತ್ಯೆಗೈದು, ಅವರ ಅಂತ್ಯಕ್ರಿಯೆಯ ಶಾಸ್ತ್ರೋಕ್ತವಾಗಿ ಮುಂದೆ ನಿಂತು ಮಾಡಿದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಶಿವು ಬಂಡಯ್ಯ ಸ್ವಾಮಿ(28) ಹತ್ಯೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಶಿವು ಸ್ವಾಮಿ, ಸಮುದಾಯವರ ಮದುವೆ, ನಿಶ್ಚಿತಾರ್ಥ ಕಾರ್ಯಗಳನ್ನು ಮಾಡುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಶೋಭಾ ಅವರ ಮಾಲೀಕತ್ವದ ಮನೆಯನ್ನು ಬಾಡಿಗೆಗೆ ನೀಡಿದ್ದರು. ಕಳೆದ ಕೆಲವು ದಿನಗಳಿಂದ ಶೋಭಾ ಅವರು ಶಿವು ಬಂಡಯ್ಯಸ್ವಾಮಿಗೆ ಮನೆಯನ್ನು ಬಿಡುವಂತೆ ತಿಳಿಸಿದ್ದರು. ಠೇವಣಿ ಮರಳಿಸುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಇದೇ ವಿಚಾರಕ್ಕೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ.
ಸೆ.21ರಂದು ಆರೋಪಿ ಮಾಲೀಕರ ಮನೆಗೆ ಹೋಗಿ ಶೋಭಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ. ಶೋಭಾರಿಗೆ ಓರ್ವ ಪುತ್ರನಿದ್ದು, ಅವರು ಊರಲ್ಲಿ ಇರಲಿಲ್ಲ. ತಾಯಿಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಅಂತ ಬರುತ್ತಿತ್ತು. ಆಗ ಅವರ ಮಗ ಶಿವು ಬಂಡಯ್ಯಸ್ವಾಮಿಗೆ ಫೋನ್ ಮಾಡಿ ವಿಚಾರಿಸಿದ್ದಾನೆ.
ಮನೆಗೆ ಬಂದು ಗಮನಿಸಿದಂತೆ ಮಾಡಿ ಮನೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪುತ್ರನಿಗೆ ಮಾಹಿತಿ ತಿಳಿಸಿದ್ದನು. ಪುರೋಹಿತ ಕೆಲಸ ಮಾಡುತ್ತಿದ್ದ ಶಿವುಬಂಡಯ್ಯ ಸ್ವಾಮಿಯೇ ಮಹಿಳೆಯ ಸಂಸ್ಕಾರದ ಕಾರ್ಯಗಳೆಲ್ಲವನ್ನೂ ಮಾಡಿದ್ದನು. ತಾಯಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಅದರಿಂದಲೇ ಮೃತಪಟ್ಟಿರಬಹುದು ಎಂದು ಮಗ ಚೆನ್ನಬಸವ ಪಾಟೀಲ ನಂಬಿದ್ದರು.
ಇದನ್ನು ಓದಿದ್ದೀರಾ? ರಾಯಚೂರು | ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಮಾಡಲು ಒತ್ತಾಯಿಸಿ ಮನವಿ
ಅಂತ್ಯಕ್ರಿಯೆ ನಂತರ ತಾಯಿಯ ಚಿನ್ನದ ಸರ, ಕಿವಿಯೋಲೆ, ಮೊಬೈಲ್ ಮನೆಯಲ್ಲಿ ಶೋಧಿಸಿದರೂ ಸಿಗದಿದ್ದಾಗ ಅನುಮಾನಗೊಂಡ ಮಗ ಪೊಲೀಸರಿಗೆ ದೂರು ನೀಡಿದ್ದಾನೆ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಶಿವು ಬಂಡಯ್ಯ, ಶೋಭಾ ಹತ್ಯೆಯಾದ ದಿನ ಮನೆಯ ಸಮೀಪ ಬಂದಿರುವ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಉಸಿರುಗಟ್ಟಿಸಿ ಕೊಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
