ಇತ್ತೀಚಿಗೆ ನಿತ್ಯವೂ ಬಾಣಂತಿಯರ ಸಾವು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ವಿರುದ್ಧ ಘೋಷಣೆ ಕೂಗಿದರು.
“ರಾಜ್ಯದ ಹಲವು ಕಡೆ ಬಾಣಂತಿಯರ ಸಾವು ವರದಿಯಾಗುತ್ತಿದೆ. ಅದೆಷ್ಟೋ ಮಂದಿ ಜೀವ ಕಳೆದುಕೊಂಡು ಶಾಪ ಹಾಕುತ್ತಿದ್ದಾರೆ. ಸರ್ಕಾರ ಕಡಿವಾಣ ಹಾಕುವುದರಲ್ಲಿ ಗಮನಹರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವನ್ನಪ್ಪಿದ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಬಾಣಂತಿಯರು ಮತ್ತು ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆಯನ್ನು ಖಾತ್ರಿಪಡಿಸಲು ಮೇಲ್ವಿಚಾರಣೆ ಸಮಿತಿ ರಚಿಸಬೇಕು” ಎಂದು ಒತ್ತಾಯಿಸಿದರು.
“ಮಹಿಳೆಯರು, ಬಾಣಂತಿಯರ ಸಾವು ತಡೆಯಲು ವಿಫಲವಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜೀನಾಮೆ ನೀಡಬೇಕು. ಬಾಣಂತಿಯರ ಸಾವು ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ
ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಲಲಿತಾ ಕಡಗೋಲ, ಶರಣಮ್ಮ ಕಾಮರೆಡ್ಡಿ, ಸುಮಾ ಗಸ್ತಿ, ಜಯಶ್ರೀ, ಸುಮತಿಶಾಸ್ತ್ರಿ, ನಾಗವೇಣಿಸಾಹುಕಾರ್, ಸುಲೋಚನಾ, ಪಿ ಯಲ್ಲಪ್ಪ, ಡಾ ನಾಗರಾಜ ಬಾಲ್ಕಿ, ಎನ್ ಕೆ ನಾಗರಾಜ, ವಿಜಯ ಭಾಸ್ಕರ್ ಇಟಗಿ ಇದ್ದರು.
