ಶ್ರಮ, ಸಾರ್ವಭೌಮ, ಸಂಸ್ಕೃತಿ ಅಳಿಸಿ ಅದರ ಜಾಗದಲ್ಲಿ ಕಾರ್ಪೊರೇಟ್ ಪರವಾದ ಮನು ಸಂಸ್ಕೃತಿಯನ್ನು ಜಾರಿ ಮಾಡಲು ಹೊರಟ ಫ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಿದೆ ಎಂದು ಆರ್‌ಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತುಹೀನ್ ದೆಬ್ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್‌ಸಿಎಫ್ ಹಮ್ಮಿಕೊಂಡಿದ್ದ ಎರಡು ದಿನಗಳ ʼಅಖಿಲಭಾರತ ಜನ ಸಾಂಸ್ಕೃತಿಕ ಶಿಬಿರʼ ಹಾಗೂ ಇಂಡಿಯಾ ವಸರ್ಸ್ ಹಿಂದೂರಾಷ್ಟ್ರ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದೇಶದ ಬಹು ಸಂಸ್ಕೃತಿಯನ್ನು ನಾಶಮಾಡಿ, ಹಿಂದುತ್ವ ಆರ್‌ಎಸ್‌ಎಸ್, ಬಿಜೆಪಿ ಅಜಂಡದಂತೆ ಮನು ಸಂಸ್ಕೃತಿಯನ್ನು ಜನರ ಮೇಲೆ ಹೇರಲು ಹೊರಟಿರುವುದನ್ನು ಅವರು ಖಂಡಿಸಿದರು.
ಸಂವಿಧಾನ, ಪ್ರಜಾತಂತ್ರ, ಜಾತ್ಯಾತೀತ, ಮೀಸಲಾತಿಯನ್ನು ಉಳಿಸಲು ಸಾಂಸ್ಕೃತಿಕವಾಗಿ ತೀವ್ರ ಸಂಘರ್ಷಕ್ಕೆ ಇಳಿಯಬೇಕಾಗಿದ್ದು, 18ನೇ ಲೋಕಸಭಾ ಚುನಾವಣೆಯಲ್ಲಿ ಅತ್ಯವಶ್ಯಕವಾದ ಪಾತ್ರವನ್ನು ಆರ್‌ಸಿಎಫ್ ವಹಿಸಲಿದೆ ಎಂದರು.
ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಅವರು ಎರಡು ದಿನಗಳ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸೇರಿದಂತೆ ದೇಶದ 12ಕ್ಕೂ ಹೆಚ್ಚು ರಾಜ್ಯಗಳಿಂದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿ, ಸಾಹಿತಿ ಕಲಾವಿದರು 20ಕ್ಕೂ ಹೆಚ್ವು ಆರ್‌ಎಸ್‌ಎಸ್, ಬಿಜೆಪಿ ಹಿಂದುತ್ವ, ಫ್ಯಾಸಿಸಮ್ ವಿರುದ್ಧದ ಜನಪರ ಕವನಗಳನ್ನು ಅಚ್ಚುಕಟ್ಟಾಗಿ ಓದಿ ಫ್ಯಾಸಿಸ್ಟ್ ಸರ್ಕಾರ ಅಳಿಯಲಿ, ದೇಶ ಉಳಿಯಲಿ, ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ, ಜನ ಸಂಸ್ಕೃತಿ ಚಿರಾಯುವಾಗಲಿ ಎಂಬ ಆಧಾರದಡಿಯಲ್ಲಿ ಕ್ರಾಂತಿಕಾರಿ ಕವನಗಳ ವಾಚನ ಮಾಡಿದರು.
ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದ ಜನಕವಿ, ಸಾಹಿತಿ ಸಿ.ದಾನಪ್ಪ ನಿಲೋಗಲ್ ಮಾತನಾಡಿ, ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸಲು ಫ್ಯಾಸಿಸ್ಟ್ ದುರಾಡಳಿತದ ಕಾರ್ಪೊರೇಟ್ ಸಂಸ್ಕೃತಿಯನ್ನು ಹಿಮ್ಮೆಟ್ಟಿಸಲು ಇಂದಿನ ಗೋಷ್ಠಿಯಲ್ಲಿ ಮೊಳಗಿದ ಇಂಡಿಯಾ ಪರ ಕವನಗಳು ಹಿಂದೂರಾಷ್ಟ್ರದ ನಕಲಿ ದೇಶಪ್ರೇಮಿ ಆರೆಸ್ಸೆಸ್ ಬಿಜೆಪಿಯ ಮುಖವಾಡ ಕಳಿಚಲು, ಜನ ತಾಂತ್ರಿಕತೆಯನ್ನು ದೇಶಕ್ಕೆ ಆರ್‌ಸಿಎಫ್ ಮೂಲಕ ರವಾನಿಸುವ ಏಕೈಕ ಜನತಾ ರಾಜಕೀಯ ಜನ ಸಾಂಸ್ಕೃತಿಕ ಪ್ರಜ್ಞೆ ಸಮಕಾಲೀನವಾಗಿದೆ ಎಂದರು.
ವೇದಿಕೆ ಮೇಲೆ ಕೊಲ್ಕತ್ತಾದ ಆರ್‌ಸಿಎಫ್‌ನ ರಾಷ್ಟ್ರೀಯ ಮುಖಂಡರಾದ ಅಶಿಮಗಿರಿ, ರಾಜ್ಯ ಉಸ್ತುವಾರಿ ಮುಖಂಡರಾದ ಎಂ.ಗಂಗಾಧರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಪಟು ಎಂ.ಆರ್.ಭೇರಿ ಕವಿಗೋಷ್ಠಿ ನಡೆಸಿಕೊಟ್ಟರು. ಆದೇಶ ನಗನೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲ್ ಕೇರಳ, ಬಾಲಕೃಷ್ಣ, ಪ್ರವಿಂಟ್, ಆಂಧ್ರ ಪ್ರದೇಶದ ರಾಮಣ್ಣ, ವೆಂಕಟೇಶ, ಮದ್ಯಪ್ರದೇಶದ ಫಹೀಮ್, ದೆಹಲಿಯ ನಿರಂಜನ್ ಆಜಾದ್, ಕವಿ, ಮಹೇಂದ್ರ ಕುರ್ಡಿ, ಆರ್. ಹುಚ್ಚರೆಡ್ಡಿ, ಎಚ್.ಆರ್. ಹೊಸಮನಿ, ಮುದಿಯಪ್ಪ, ರಂಜೀತ್, ಅಜೀಜ್ ಜಾಗೀರದಾರ್, ನಿರಂಜನ ಸೇರಿದಂತೆ ಇತರರು ಭಾಗವಹಿಸಿದ್ದರು.
