ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಸೇರಿದಂತೆ ಐದು ಅಂಶಗಳ ಪ್ರಗತಿಯ ಆಧಾರದ ಮೇಲೆ ನೀತಿ ಆಯೋಗ ದೇಶದಲ್ಲಿಯೇ ರಾಯಚೂರು ಜಿಲ್ಲೆಗೆ ಮೊದಲ ಸ್ಥಾನ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ರಾಯಚೂರು ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, “ನೀತಿ ಆಯೋಗ ಪ್ರತಿ ತಿಂಗಳು ಮಾಹಿತಿಯನ್ನು ಕ್ರೋಢೀಕರಣ ಮಾಡುತ್ತದೆ. ಐದು ಅಂಶಗಳಲ್ಲಿಯೂ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಜೂನ್ ತಿಂಗಳ ಮಾಹಿತಿ ಆಧಾರಿಸಿ ಎಲ್ಲದರಲ್ಲಿಯೂ ಮೊದಲ ಸ್ಥಾನ ರಾಯಚೂರು ಜಿಲ್ಲೆಯಿದ್ದು, ಜಿಲ್ಲೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದೆ. 10 ಕೋಟಿ ವಿಶೇಷ ಅನುದಾನ ಬಳಕೆಯ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಬೇಕಿರುವ ಅಗತ್ಯತೆ ಆಧಾರದ ಮೇಲೆ ಕ್ರಿಯಾ ಯೋಜನೆ ರೂಪಿಸಿ, ಕೇಂದ್ರಕ್ಕೆ ರವಾನಿಸಲಾಗುತ್ತದೆ. ಕ್ರಿಯಾ ಯೋಜನೆ ಅನುಮೋದನೆ ನಂತರವಷ್ಟೇ ಅನುದಾನ ಬಿಡುಗಡೆಯಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಆರೋಗ್ಯ ಮತ್ತು ಪೌಷ್ಠಿಕತೆ, ಶಿಕ್ಷಣ, ಕೃಷಿ ಮತ್ತು ನೀರಿನ ಸಂಪನ್ಮೂಲ ಬಳಕೆ, ಆರ್ಥಿಕ ಅಭಿವೃದ್ದಿ ಮತ್ತು ಕೌಶಲ್ಯಾಭಿವೃದ್ದಿ, ಮೂಲಭೂತ ಸೌಕರ್ಯಗಳಲ್ಲಿ ಜೂನ್ ತಿಂಗಳಲ್ಲಿ ಆಗಿರುವ ಬದಲಾವಣೆಗೆ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಶ್ರಮವಿದೆ. ಎಲ್ಲವೂ ಅಭಿವೃದ್ದಿಯಾಗಿದೆ ಎಂದು ಹೇಳಲಾಗದೇ ಇದ್ದರೂ ಬದಲಾವಣೆಯಾಗಿದೆ” ಎಂದರು.
“ಶಾಲಾ ಕಟ್ಟಡ, ಮೂಲಭೂತ ಸೌಕರ್ಯ ಸೇರಿದಂತೆ ಆಯಾ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ಏರಿಕೆ ಕಂಡಿದೆ. ಇನ್ನೂ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕಿದೆ. ನೀತಿ ಆಯೋಗದಿಂದ ಲಭ್ಯವಾಗುವ 10 ಕೋಟಿ ರೂ. ಅನುದಾನವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳುವ ಆದ್ಯತೆಯನ್ನಿಟ್ಟುಕೊಳ್ಳಲಾಗಿದೆ.” ಎಂದು ಹೇಳಿದರು.
ಮಹತ್ವಾಕಾಂಕ್ಷೆ ಜಿಲ್ಲೆಯೆಂದು ಗುರುತಿಸಿರುವ ಜಿಲ್ಲೆಯಲ್ಲಿ ಕೈಗಾ, ಹಟ್ಟಿ, ಕೆಪಿಸಿ ಸೇರಿದಂತೆ ಅನೇಕ ಕಂಪನಿಗಳು, ಉದ್ಯಮಗಳು ನೆರವಿಗೆ ಬಂದಿವೆ. ಜಿಲ್ಲೆಯ ಅಭಿವೃದ್ದಿ ಬದಲಾವಣೆಗೆ ಎಲ್ಲರ ಸಹಕಾರವೂ ಅಗತ್ಯವಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹಾಸ್ಟೆಲ್‌ಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರವಾಗಬೇಕು: ಶಾಸಕ ದೇವೇಂದ್ರಪ್ಪ
“ಜಿಲ್ಲೆಯಲ್ಲಿ ನಡೆದಿರುವ ಗಣಿ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಹಿಂದಿರುವ ಶಕ್ತಿಗಳಿಗೂ ಶಿಕ್ಷೆ ವಿಧಿಸಲು ಕ್ರಮ ವಹಿಸಲಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ತಡೆಯಲು ಬೇಕಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಡಿಸಿ ದುರಗೇಶ ಸೇರಿದಂತೆ ಇತರೆ ಅಧಿಕಾರಿಗಲು ಇದ್ದರು.