ರಿಮ್ಸ್ ಆಸ್ಪತ್ರೆ ಅವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ನಡೆಸಲಾಗುತ್ತಿದ್ದ ಅನಿರ್ದಿಷ್ಠಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದ್ದು, ಆಗಸ್ಟ್ 15ರೊಳಗೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದೇ ಇದ್ದರೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಘೇರಾವ್ ಮಾಡಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಯಚೂರು ಜಿಲ್ಲಾ ಸಂಚಾಲಕ ಎಸ್ ನರಸಿಂಹಲು ಎಚ್ಚರಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಸಮರ್ಪಕವಾಗಿ ದೊರೆಯದೇ ಬಡರೋಗಿಗಳು ಪರದಾಡುವಂತಾಗಿದೆ. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಹೊರ ಮತ್ತು ಒಳರೋಗಿಗಳು ಚಿಕಿತ್ಸೆ ಪಡೆಯಲು ಹಣ ಹಿಡಿದುಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ರಿಮ್ಸ್ ನಿರ್ದೇಶಕರು, ಆಡಳಿತಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸಮರ್ಪಕ ಸಿಬ್ಬಂದಿಯಿಲ್ಲದೇ ಇರುವುದರಿಂದ ಆಸ್ಪತ್ರೆ ಆಡಳಿತ ವಿಫಲವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ” ಎಂದರು.
“ನಾಲ್ಕು ದಿನಗಳ ನಂತರ ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತರು ಆಗಮಿಸಿ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಆದರೆ ಜಿಲ್ಲಾಧಿಕಾರಿಗೆ ನಾಲ್ಕು ಬಾರಿ ಮನವಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದು, “ಕೂಡಲೇ ಜಿಲ್ಲೆಯ ಏಕೈಕ ಸರ್ಕಾರಿ ಆಸ್ಪತ್ರೆಯನ್ನು ಜನರ ಸೇವೆಗೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾಸ್ಟೆಲ್ ವಾರ್ಡನ್ ಅಮಾನತಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹ
ಈ ಸಂದರ್ಭದಲ್ಲಿ ದಲಿತ ಸಮರ ಸೇನೆ ಅಧ್ಯಕ್ಷ ನೀಲಕಂಠ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹನುಮೇಶ ಆರೋಲಿ, ಜಂಬಯ್ಯ, ಫಕ್ರುದ್ದೀನ್ ಅಲಿ ಅಹ್ಮದ್, ಶ್ರೀನಿವಾಸರಾಜು, ಬಾಬು ಹರಿಜನವಾಡ, ಅನ್ವರ್, ನಾಗೇಂದ್ರ, ಶೇಖ್ ಜಲಾಲ ಸೇರಿದಂತೆ ಇತರರು ಇದ್ದರು.