ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಯುವ ಸಮೂಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಇದನ್ನು ತಡೆಗಟ್ಟಲು ಇಲಾಖೆಗಳು ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಬಾದರ್ಲಿ ಹೇಳಿದರು.
ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಇತ್ತೀಚೆಗೆ ತಾಲೂಕಿನಲ್ಲಿ ಗಾಂಜಾ, ಡ್ರಗ್ ಸೇರಿದಂತೆ ಅಮಲೇರಿಸುವ ಪದಾರ್ಥಗಳ ಮಾರಾಟ ಜಾಲ ಹೆಚ್ಚುತ್ತಿದ್ದು, ಇದರಿಂದ ಅನೇಕ ಯುವಕರ ಭವಿಷ್ಯ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಕಮರುತ್ತಿದೆ. ಯುವ ಸಮೂಹದ ಸದೃಢ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಭವ್ಯ ದೇಶ ಕಟ್ಟಲು ಮುಂದಡಿಯಿಡಬೇಕು” ಎಂದರು.
ಯಾವುದೇ ರೀತಿಯಲ್ಲೂ ಮಕ್ಕಳು, ಯುವಕರು ಹಾಗೂ ಅವರ ಕುಟುಂಬ ಬೀದಿಗೆ ಬರದಂತೆ ರಕ್ಷಿಸುವ ಕೆಲಸ ಆಗಬೇಕು. ಇಲಾಖೆಯು ಜಿಲ್ಲಾದ್ಯಂತ ತಂಡಗಳನ್ನು ರಚಿಸಿ ಎಗ್ಗಿಲ್ಲದೆ ನಡೆಯುತ್ತಿರುವ ಮಾದಕ ವಸ್ತು ಮಾರಾಟ ಜಾಲಗಳನ್ನು ಬೇಧಿಸಬೇಕು. ಮಾರಾಟ ಮತ್ತು ಸೇವನೆ ಮಾಡಿದವರಿಗೆ ಕಠಿಣ ಶಿಕ್ಷೆ ಎನ್ನುವ ಕಾನೂನು ರೂಪಿಸಬೇಕು. ಇಲ್ಲವಾದಲ್ಲಿ ಸಣ್ಣ ವಯಸ್ಸಿಗೇ ಮಕ್ಕಳಾದಿಯಾಗಿ ಮಾದಕ ಕೂಪಕ್ಕೆ ಬಿದ್ದು ಕುಟುಂಬ ಸಮೇತ ಭವಿಷ್ಯ ಹಾಳಾಗುತ್ತದೆ” ಎಂದು ಕಳವಳಗೊಂಡರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ: ಸಚಿವ ಬೋಸರಾಜು
ಈ ವೇಳೆ ನಿಸಾರ್ ಖಾನ್, ಜಾವಿದ್ ಖಾದ್ರಿ, ಅಬ್ದುಲ್ ನಾಯಕ್, ಸಿರಾಜ್ ಪಾಶ, ಹನುಮಂತಪ್ಪ ಕರ್ಲಿ ಸೇರಿದಂತೆ ಇತರರು ಇದ್ದರು.
