ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ನವೀಕರಣಗೊಂಡಿದ್ದು, ಕಲಾವಿದರು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಸರ್ಕಾರದ ಆಸ್ತಿಯನ್ನು ಕಾಪಾಡಿಕೊಳ್ಳಲು ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ ಹೇಳಿದರು.
ಅವರು ರಾಯಚೂರು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನವೀಕರಣಗೊಂಡ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಂಗಮಂದಿರ ಈ ಹಿಂದೆ 1992ರಲ್ಲಿ ನಿರ್ಮಾಣವಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಕಾಲಕಾಲಕ್ಕೆ ನವೀಕರಣ ಮಾಡಲಾಗಿದೆ. ಜನರ ಅಪೇಕ್ಷೆಯಂತೆ ನವೀಕರಣ ಮಾಡಿದ್ದು, ಜನರು ಸಹ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ರಂಗಮಂದಿರ ಇದು ತಮ್ಮ ಆಸ್ತಿಯಾಗಿದ್ದು ಕಾಪಾಡಿಕೊಂಡು ಹೋಗಬೇಕು ಎಂದರು.
ಶಾಲೆಗಳು, ರಂಗಮಂದಿರ, ಕ್ರೀಡಾಂಗಣ ಸೇರಿ ಬಹುತೇಕ ಜನರ ಬಳಕೆ ಮಾಡಿಕೊಳ್ಳಲು ಸರ್ಕಾರದಿಂದ ಅನುದಾನ ಖರ್ಚು ಮಾಡಲಾಗಿದೆ, ಜನರು ಸರಿಯಾಗಿ ಉಪಯೋಗ ಮಾಡಿಕೊಳ್ಳದಿದ್ದರೆ ಅದು ಮಾಡಿದ್ದು ಸಾರ್ಥಕವಿಲ್ಲದಂತೆ, ಮಾಡಿದನ್ನು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕೆಕೆಆರ್‌ಡಿಬಿಯಿಂದ 3 ಕೋಟಿ ವೆಚ್ಚದಲ್ಲಿ ರಂಗಮಂದಿರದಲ್ಲಿ ಜನರ ಬೇಡಿಕೆಯಂತೆ ಚೇರ್, ಬೆಳಕಿನ ವ್ಯವಸ್ಥೆ, ವಿದ್ಯುತ್, ಧ್ವನಿ ವರ್ಧಕ ಸೇರಿದಂತೆ ಬಹುತೇಕ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸರ್ಕಾರದ ಯೋಜನೆಗಳು ಜನರಿಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಸಮಾಜದ ಅಭಿವೃದ್ಧಿಗೆ 1.50ಕೋಟಿ ನೀಡಲಾಗಿದ್ದು, ಎರಡು ತಿಂಗಳಲ್ಲಿ ಕೆಲಸ ಪೂರ್ಣವಾಗಲಿದೆ. ಕರ್ನಾಟಕ ಸಂಘದ ಅನುದಾನ ನೀಡಿದೆ, ಅದು ಕೆಲಸ ನಡೆಯುತ್ತಿದೆ, ನಗರದಲ್ಲಿ ಕೆಲ ಸರ್ಕಾರಿ ಶಾಲೆಗಳ ಕಟ್ಟಡಗಳು ದುರಸ್ತಿಯಲ್ಲಿದ್ದು, ಅವುಗಳ ನಿರ್ಮಿಸಿ ಮರು ಬಳಕೆ ಮಾಡಿಕೊಳ್ಳಬೇಕಾಗಿದೆ, ಕೆಕೆಆರ್‌ಡಿಬಿಯಲ್ಲಿ ಸಾಕಷ್ಟು ಅನುದಾನವಿದೆ, ಆದರೆ ಬಳಕೆಯಾಗುತ್ತಿಲ್ಲ.
ಇತ್ತೀಚಿಗೆ ಸಭೆ ನಡೆಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶೇ.25ರಷ್ಟು ಅನುದಾನ ನಿಗದಿಪಡಿಸಿದೆ. ಈಗಾಗಲೇ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಶಾಲೆಗಳು, ಅಂಗನವಾಡಿ ಸೇರಿ ಶಿಕ್ಷಣದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಈ ಹಿಂದಿನ 2500 ಕೋಟಿ ಬಳಕೆಯಾಗಿಲ್ಲ ಅದರ ಜೊತೆಗೆ 3ಸಾವಿರ ಕೋಟಿ ಜಮಾ ಇದೆ. ಮುಖ್ಯಮಂತ್ರಿಗಳು 5 ಸಾವಿರ ಕೋಟಿ ನೀಡಲು ಸಿದ್ದರಿದ್ದಾರೆ. ಆದರೆ, ಉಳಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಈ ಹಿಂದೆ ರಂಗಮಂದಿರ 75ಲಕ್ಷದಲ್ಲಿ ನವೀಕರಣ ಮಾಡಲಾಗಿತ್ತು, ಚೇರ್, ಸೇರಿದಂತೆ ಇತರೆ ಕಾಮಗಾರಿ ಮಾಡಲಾಗಿದೆ, ಜನರ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಸಂಪೂರ್ಣ ನವೀಕರಣ ಮಾಡಲು ಸಭೆ ಮಾಡಿ ಇದೀಗ ನವೀಕರಣ ಮಾಡಲಾಗಿದೆ, ಉತ್ತಮ ಧ್ವನಿವರ್ಧಕ, ಲೈಟಿಂಗ್, ಚೇರ್, ಶೌಚಾಲಯ, ಕುಡಿಯುವ ನೀರು, ರಂಗಮಂದಿರದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ರಂಗಮಂದಿರ ಸಾರ್ವಜನಿಕರ ಆಸ್ತಿಯಾಗಿದ್ದು ಅಧಿಕಾರಿಗಳ ಜೊತೆಗೆ ಕಾಪಾಡಿಕೊಳ್ಳಲು ಜನರ ಜವಾಬ್ದಾರಿ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ನಗರಸಭೆ ಸದಸ್ಯ ಈ. ಶಶಿರಾಜ, ಮಾಜಿ ಸದಸ್ಯ ಜಿ.ಶಿವಮೂರ್ತಿ, ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ, ನರಸಿಂಹಲು ಮಾಡಗಿರಿ, ಬಿಜೆಪಿ ಮುಖಂಡರಾದ ರವಿಂದ್ರ ಜಲ್ದಾರ್, ಕಡಗೋಲ್ ಆಂಜನೇಯ, ಶ್ರೀನಿವಾಸ ರೆಡ್ಡಿ, ಪೋಗಲ್ ಶ್ರೀನಿವಾಸರೆಡ್ಡಿ, ನರಸರೆಡ್ಡಿ ಸೇರಿದಂತೆ ಅನೇಕರು ಇದ್ದರು.