ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷೆ ಬೇಡದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗಮ ಮತ್ತು ಲೈಂಗಿಕ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ದಿಶಾ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಇತ್ತೀಚೆಗೆ ದೇವದುರ್ಗದಲ್ಲಿ ಜೋಗಪ್ಪ, ಜೋಗಮ್ಮ ಸಮುದಾಯದವರು ಭಿಕ್ಷೆ ಬೇಡಬಾರದೆಂದು ಹೇಳಿ ಪೊಲೀಸ್ ವಾಹನದಲ್ಲಿ ಕರೆತಂದಿದ್ದಾರೆ. ನಾವು ದೌರ್ಜನ್ಯದಿಂದ ಹಣ ಕೇಳುತ್ತಿಲ್ಲ. ಭಿಕ್ಷಾಟನೆ ಮಾಡುತ್ತಿದ್ದೇವೆ, ಭಿಕ್ಷೆ ಬೇಡಬಾರದು ಅದು ಅಪರಾಧವೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಹಾಗಾದರೆ ಸಂಘ ಸಂಸ್ಥೆಗಳು, ಎನ್‌ಜಿಒಗಳು ದೇಣಿಗೆ ಪಡೆದು ಸಮಾಜ ಸೇವೆ ಮಾಡುತ್ತಿರುವುದೂ ಕೂಡ ಒಂದು ರೀತಿಯ ಭಿಕ್ಷಾಟನೆಯಲ್ಲವೇ” ಎಂದರು.
“ಸರ್ಕಾರ ಶೇ.1ರಷ್ಟು ಮೀಸಲಾತಿ ನೀಡಿದೆ. ಆದರೆ ವಿದ್ಯಾಭ್ಯಾಸ ಮಾಡಿದವರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿದೆ. ಸ್ವಯಂ ಗುಂಪು ರಚನೆ ಮಾಡಿಕೊಂಡು ಹಣ ಸಂಗ್ರಹಿಸಿ ಸಾಕಷ್ಟು ಜನರು ಸ್ವಯಂ ಉದ್ಯೊಗ ಮಾಡುತ್ತಿದ್ದೇವೆ. ಖಾಸಗಿಯಲ್ಲಿ ಕೆಲಸ ಮಾಡಲು ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಅನಿವಾರ್ಯವಾಗಿ ಯಾವುದೇ ದಬ್ಬಾಳಿಕೆ, ದೌರ್ಜನ್ಯ ಮಾಡದೇ ಬೇಡಿ ತಿನ್ನುತ್ತಿದ್ದೇವೆ. ಆದರೆ ಸಮಾಜ ಕಲ್ಯಾಣ ಇಲಾಖೆ ಇದಕ್ಕೂ ಕಲ್ಲು ಹಾಕುತ್ತಿದೆ” ಎಂದು ಆರೋಪಿಸಿದರು.
“ಸಮಾಜ ಕಲ್ಯಾಣ ಇಲಾಖೆಯು ಅಲ್ಪ ಸಂಖ್ಯಾತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾನೂನು ಪ್ರಕಾರ ಭಿಕ್ಷಾಟನೆ ಅಪರಾಧ ಅಲ್ಲ, ದೌರ್ಜನ್ಯದಿಂದ ಕಿತ್ತುಕೊಂಡರೆ ಕ್ರಮ ಕೈಗೊಳ್ಳಲಿ” ಎಂದರು.
“ಸ್ವಯಂ ಉದ್ಯೋಗ ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ 30 ಸಾವಿರ ನೀಡುತ್ತಿದೆ. ಆದರೆ ಅಷ್ಟು ಸಾಕಾಗುತ್ತಿಲ್ಲ. ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕೆಂಬ ಬೇಡಿಕೆ ಇದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು ಹಾಗೂ ಸ್ವಯಂ ಉದ್ದೋಗ ನೀಡಲು ಅವಕಾಶ ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.
ದಲಿತ ಮುಖಂಡ ಎಂ ಆರ್ ಭೇರಿ ಮಾತನಾಡಿ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿರುವ ಅಲ್ಪಸಂಖ್ಯಾತರಿಗೆ ಭಿಕ್ಷೆ ಬೇಡುವುದು ಅಪರಾಧವೆಂದು ಹೇಳಿದ್ದು, ಇದು ಮಾನವ ಹಕ್ಕುಗಳನ್ನು ಕಸಿದುಕೊಂಡಂತೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಡೆ ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಶೇ. 40ರಷ್ಟು ಬಡ್ಡಿ ದಂಧೆ; ಕ್ರಮಕ್ಕೆ ಮನವಿ
“ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು. ಇಂಥವರಿಗೆ ಆಸರೆಯಾಗಬೇಕು. ಸರ್ಕಾರವು ಯಾವುದೇ ಸಾಲ ಸೌಲಭ್ಯ ನೀಡದೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‌ಗಳಿಂದ ಸ್ಪಂದನೆ ದೊರೆಯುತ್ತಿಲ್ಲ. ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಹಣ ಭರಿಸಬೇಕು. ಖಾಸಗಿ ವಲಯದಲ್ಲಿ ಉದ್ಯೋಗ ನೀಡುತ್ತಿಲ್ಲ, ಅನಿವಾರ್ಯವಾಗಿ ಜೀವನ ನಡೆಸಲು ಭಿಕ್ಷೆ ಬೇಡಿ ತಿನ್ನುತ್ತಿದ್ದಾರೆ. ಇದನ್ನೇ ಒಂದು ಅಪರಾಧವೆಂದು ಭಾವಿಸುವುದು ತಪ್ಪು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತಿ, ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಅಧ್ಯಕ್ಷೆ ಮಾರಮ್ಮ, ರಂಗಮ್ಮ ಜಾಲಹಳ್ಳಿ, ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ