ರಾಯಚೂರು ಜಿಲ್ಲೆ ಲಿಂಗಸೂಗೂರು ರಸ್ತೆಯ ಬೀದಿಬದಿ ಸಣ್ಣ-ಪುಟ್ಟ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರ ನಿರ್ದೇಶನದ ಮೇರೆಗೆ ಪುನರ್ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡುವಂತೆ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರು-ಲಿಂಗಸೂಗೂರು ರಾಜ್ಯ ಹೆದ್ದಾರಿಯಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ರಾಯಚೂರು ಜಿಲ್ಲಾಡಳಿತ ಏಕಾಏಕಿ ಸುಮಾರು 100ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಹಾಗೂ ಅವರ ಕುಟುಂಬಗಳನ್ನು ಬೀದಿ ಪಾಲು ಮಾಡಿತ್ತು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಾವಿರಾರು ಜನ ಬೀದಿಬದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಿದ ನಗರದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ” ಎಂದು ಸಂಘದ ಮುಖಂಡರು ಆರೋಪಿಸಿದರು.
“ಡಾ. ಬಿ ಆರ್ ಅಂಬೇಡ್ಕರ್ ಾವರ ಸಂವಿಧಾನ ಅನುಚ್ಛೇದ 19(1)ಜಿ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೆ ವ್ಯಾಪಾರ ಮಾಡುವ ಹಕ್ಕು ಇದ್ದು, 2014ರ ಬೀದಿಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆಯ ವಿರುದ್ಧವಾಗಿ ರಾಯಚೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗಳು ನಡೆದುಕೊಳ್ಳುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಾದ ಆತ್ಮ ನಿರ್ಭರ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆಗಳಂತಹವು ಬದುಕುನ್ನು ಹಸನು ಮಾಡಲು ಬಳಸದೆ ನಮ್ಮ ವಿನಾಶಕ್ಕೆ ಬಳಸಲಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ನಗರಸಭೆಯಿಂದ ಗುರುತಿನ ಚೀಟಿ ಪಡೆದಿರುವ ನಮ್ಮನ್ನು ಕಾನೂನು ಪ್ರಕಾರ ಬೀದಿಬದಿಯಲ್ಲಿ ನಮ್ಮನ್ನು ಬದುಕಲು ಬಿಡದೆ, ಪ್ರತಿದಿನ ಬಿಸಿಲು, ಮಳೆ, ಗಾಳಿ ಹಾಗೂ ಚಳಿಯೆನ್ನದೇ ಸಣ್ಣ-ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ದಿನಕ್ಕೆ 200 ರೂಪಾಯಿಯನ್ನು ಉಳಿಸಿ ನಮ್ಮ ಬದುಕನ್ನು ಸಾಗಿಸಬೇಕಿದೆ. ಅದರಲ್ಲಿ ಫೈನಾನ್ಸ್, ಬ್ಯಾಂಕ್ ಹಾಗೂ ಖಾಸಗಿಯವರಿಂದ ಪಡೆದ ಸಾಲ ತೀರಿಸಲಾಗದೇ ಪರದಾಡುತ್ತಿದ್ದೇವೆ. ಮಾರುಕಟ್ಟೆ ಪೈಪೋಟಿಗಿಳಿದಿರುವ ಕಾರ್ಪೊರೇಟ್ ಕಂಪನಿಗಳು ತಲೆ ಎತ್ತಿರುವ ಸಂದರ್ಭದಲ್ಲಿ ಒಪ್ಪತ್ತಿನ ಗಂಜಿಗಾಗಿ ಜೀವನ ಮತ್ತು ಜೀವ ತೆತ್ತವರು ಬಹಳಷ್ಟು ಜನ ಇದ್ದ ಕಾರಣ ನಾವು ಬದುಕಿ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಕ್ಕೆ ಜೀವನಾಡಿಯಾದ ನಮ್ಮನ್ನು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು” ಬೀದಿ ಬದಿ ವ್ಯಾಪಾರಿಗಳು ಮನವಿ ಮಾಡಿದರು.
“ಕೂಡಲೇ ನ್ಯಾಯಾಧೀಶರನ್ನೊಳಗೊಂಡು ಇತರೆ ಅಧಿಕಾರಿಗಳು ಹಾಗೂ ಬೀದಿಬದಿ ವ್ಯಾಪಾರದ ಪ್ರತಿನಿಧಿಗಳ ನೇತೃತ್ವದಲ್ಲಿ ಪಟ್ಟಣದ ವ್ಯಾಪಾರ ಸಮಿತಿ ಮಾಡಿ, ಎಲ್ಲೆಲ್ಲಿ ಸರ್ಕಾರಿ ಜಾಗ ಖಾಲಿ ಇದೆಯೋ ಅಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ದಿನನಿತ್ಯ ಪೊಲೀಸ್ ಕಿರುಕುಳ ಡಂಡ ವಸೂಲಾತಿ ನಿಲ್ಲಿಸಬೇಕು. 2014ರ ಬೀದಿಬದಿ ವ್ಯಾಪರಸ್ಥರ ಸಂರಕ್ಷಣೆ ಕಾಯ್ದೆ ಸಂಪೂರ್ಣವಾಗಿ ಜಾರಿ ಮಾಡಬೇಕು. ಆತ್ಮ ನಿರ್ಭರ, ಡಿ. ನಲ್ಕ, ಕೌಶಲ್ಯ ಅಭಿವೃದ್ಧಿ ಯೋಜನೆಗಳಡಿ ನಮ್ಮನ್ನು ಕಾಪಾಡಿ ನಮ್ಮ ಬದುಕು ಉಳಿಸಿ ಸಾಲ ಮುಕ್ತರನ್ನಾಗಿ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಅಪಘಾತಗಳ ಕುರಿತು ಜನ ಜಾಗೃತರಾಗುವುದು ಅಗತ್ಯ: ನ್ಯಾ. ಸಿದ್ರಾಮಪ್ಪ
ಈ ವೇಳೆ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ. ಅಮರೇಶ, ಜಿಲ್ಲಾಧ್ಯಕ್ಷ ಶೇಖ್ ಹುಸೇನ್ ಬಾಷಾ, ಉಪಾಧ್ಯಕ್ಷ ಮೈನುದ್ದಿನ್, ಕಾರ್ಯಾಧ್ಯಕ್ಷ ಕರೀಂ ಉಲ್ಲಾ, ಕಾರ್ಯದರ್ಶಿ ರಾಜು, ಸಹ ಕಾರ್ಯದರ್ಶಿ ಮಾರೆಪ್ಪ ಸೇರಿದಂತೆ ಇತರರಿದ್ದರು.
