ಸೇಂದಿ ದಂಧೆ ನಡೆಸುತ್ತಿದ್ದ ಎರಡು ಸ್ಥಳಗಳ ಮೇಲೆ ಅಬಕಾರಿ ಇಲಾಖೆ ಮತ್ತು ಪೊಲೀಸರು ದಾಳಿ ನಡೆಸಿ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯಿಂದ ವರದಿಯಾಗಿದೆ.
ರಾಯಚೂರು ತಾಲೂಕಿನ ಅಸ್ಕಿಹಾಳ ಹಾಗೂ ಯಕ್ಲಾಸಪುರದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಓರ್ವ ವೃದ್ಧೆ ಹಾಗೂ ತಾಯಿ-ಮಗಳ ಸೇಂದಿ ದಂಧೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಯಕ್ಲಾಸಪುರದ ನಿರ್ಮಾಣ ಹಂತದ ಮನೆಯಲ್ಲಿ ಬ್ಯಾರಲ್ಗಟ್ಟಲೆ ಸೇಂದಿ ಪತ್ತೆಯಾಗಿದೆ. ಅಬಕಾರಿ ಸಿಬ್ಬಂದಿ ದಾಳಿ ವೇಳೆ ಪ್ರೇಮಾ ಎಂಬಾಕೆ ಸಿಕ್ಕಿಬಿದ್ದಿದ್ದಾಳೆ. ತಾಯಿ ಇಂದ್ರಮ್ಮಳ ಜೊತೆ ಪ್ರೇಮಾ ಸೇಂದಿ ಮಾರಾಟ ಮಾಡುತ್ತಿದ್ದಳು. ಮತ್ತೊಂದು ಕಡೆ, ಪ್ಲಾಸಿಕ್ ಪ್ಯಾಕೆಟ್ಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದ ಸೇಂದಿಯೂ ಪತ್ತೆಯಾಗಿದೆ. ಪರಿಶೀಲನೆ ವೇಳೆ ಅಬಕಾರಿ ಸಿಬ್ಬಂದಿ ಜೊತೆಗೆ ಆರೋಪಿ ಪ್ರೇಮಾ ವಾಗ್ವಾದ ಕೂಡ ನಡೆಸಿರುವುದಾಗಿ ವರದಿಯಾಗಿದೆ.
ಆರೋಪಿಗಳು ಮನೆಯಲ್ಲಿ ನಾಯಿ ಸಾಕುವ ಮೂಲಕ ಅಪರಿಚಿತರು ಬರುವ ಮಾಹಿತಿ ಪಡೆಯುತ್ತಿದ್ದರು. ಸದ್ಯ ಪ್ರೇಮಾಳನ್ನು ವಶಕ್ಕೆ ಪಡೆದು 80 ಲೀಟರ್ ಸೇಂದಿ ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಸ್ಕಿಹಾಳ ಗ್ರಾಮದ ವೃದ್ಧೆ ತಿಮ್ಮಮ್ಮ ಎಂಬವರನ್ನು ವಶಕ್ಕೆ ಪಡೆದು, ಮನೆಯಲ್ಲಿದ್ದ ಸುಮಾರು 80 ಲೀಟರ್ ಸೇಂದಿ ಜಪ್ತಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಎಟಿಎಂ ಹಣ ದೋಚಲು ಯತ್ನ; ಸಾವಿರಾರು ರೂಪಾಯಿ ಬೆಂಕಿಗಾಹುತಿ
ಸಿಎಚ್ ಪೌಡರ್ನಿಂದ ತಯಾರಿಸಲಾಗಿರುವ ಸೇಂದಿ ಕುಡಿದು ಯುವ ಜನತೆ ಹಾಳಾಗುತ್ತಿದ್ದು, ಕೂಲಿ ಕಾರ್ಮಿಕ ವರ್ಗದ ಜನ, ಕೆಲ ರೈತಾಪಿ ಜನರೇ ಹೆಚ್ಚಾಗಿ ಸೇಂದಿ ಸೇವನೆ ಮಾಡುತ್ತಿದ್ದಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಸೇಂದಿಗೆ ಜನರು ದಾಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಸಭೆಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಸೂಚಿಸಿದ್ದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಬಕಾರಿ ಇಲಾಖೆಯಿಂದ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕೆ ಪಡೆದಿದ್ದಾರೆ.