ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವತಿಯಿಂದ ನವೆಂಬರ್ 27ರಿಂದ ದೆಹಲಿಯಲ್ಲಿ ಮೂರು ದಿನಗಳ ಕಾಲ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಐಡಿಎಸ್ಒ ರಾಜ್ಯ ಘಟಕದ ಕಾರ್ಯದರ್ಶಿ ಶಿಲ್ಪಾ ಬಿ ಕೆ ತಿಳಿಸಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಿಸುವ ಬದಲು ಗೊಂದಲ ಮತ್ತು ಮೌಢ್ಯ ಬಿತ್ತುವ ಕೆಲಸ ಮಾಡಿ ಸಾಂಸ್ಕೃತಿಕ ಅದಂಪತನಗೊಳಿಸುತ್ತಿದೆ. ಶಿಕ್ಷಣ ವ್ಯಾಪಾರೀಕರಣವಾಗಿ ಸರ್ಕಾರಿ ಶಾಲೆಗಳು ದುಃಸ್ಥಿತಿಗೆ ತಲುಪಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಾಮಾಜಿಕ ಚಿಂತನೆ ಮೂಡಿಸಬೇಕಿದೆ” ಎಂದು ಹೇಳಿದರು.
“ನೂತನ ಶಿಕ್ಷಣ ನೀತಿ(ಎನ್‌ಇಪಿ) ಕರ್ನಾಟಕ ರಾಜ್ಯದಲ್ಲಿ ರದ್ದಾಗಿದೆ. ಆದರೂ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಸರ್ಕಾರಿ ಶಾಲೆಗಳು ಮೂಲಸೌಕರ್ಯವಿಲ್ಲದೇ ಮುಚ್ಚುವಂತಾಗಿವೆ. ಬಿಜೆಪಿ ಜಾರಿಗೊಳಿಸಿದ ಯೋಜನೆಗಳು, ನೀತಿಗಳನ್ನೇ ರಾಜ್ಯ ಸರ್ಕಾರ ಮುಂದುವರೆಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ನಿರಾಶ್ರಿತರಿಗೆ ಕಂಬಳಿ, ಉಣ್ಣೆ ಬಟ್ಟೆ ವಿತರಣೆ
“ಶಿಕ್ಷಣ ವ್ಯವಸ್ಥೆಯ ಕುರಿತು ಚರ್ಚೆಗಳು, ಸಂವಾದ, ಗೋಷ್ಠಿಗಳು ಈ ಸಮ್ಮೇಳನದಲ್ಲಿ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
ಗೋಷ್ಠಿಯಲ್ಲಿ ವಿದ್ಯಾರ್ಥಿ ಮುಖಂಡ ಪೀರ್ ಸಾಬ್, ಬಸವರಾಜ ಇದ್ದರು.
