ಸ್ವಾತಂತ್ರ್ಯಕ್ಕೋಸ್ಕರ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಿಟ್ಟು ಹೋರಾಡಿದ ವೀರ ಪರಾಕ್ರಮಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ ಹೇಳಿದರು.
ರಾಯಚೂರು ನಗರದ ಈದ್ಗಾ ಮೈದಾನದ ಬಳಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 275ನೇ ಜಯಂತಿ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
“ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರನ್ನು ನಡುಗಿಸಿದ್ದರು. ಅಂತಹ ಪರಾಕ್ರಮಿ ವೀರನ ವಿಚಾರಗಳನ್ನು ಸಮಾಜದಲ್ಲಿ ಪ್ರಚಾರಪಡಿಸಬೇಕಿದೆ” ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಮಾತನಾಡಿ, “ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮೈಸೂರಿನ ಹುಲಿಯೆಂದು ಖ್ಯಾತಿ ಪಡೆದಿದ್ದಾರೆ. ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಅವರ ವ್ಯಕ್ತಿತ್ವ, ತ್ಯಾಗ, ಬಲಿದಾನವನ್ನು ಸ್ಮರಿಸಬೇಕಿದೆ” ಎಂದು ಕರೆ ನೀಡಿದ ಅವರು, ನಗರದ ಟಿಪ್ಪುಸುಲ್ತಾನ್ ವೃತ್ತ ಅಭಿವೃದ್ಧಿಗೊಳಿಸಿ ಸ್ಮಾರಕ ನಿರ್ಮಾಣ ಮಾಡಬೇಕು” ಎಂದು ಹೇಳಿದರು.
ಅಂಬೇಡ್ಕರ್ ಸೇನೆಯ ಮುಖಂಡ ವಿಶ್ವನಾಥ ಪಟ್ಟಿ ಮಾತನಾಡಿ, “ಟಿಪ್ಪು ಸುಲ್ತಾನ್ ತಮ್ಮ ಮಕ್ಕಳನ್ನು ಒತ್ತೆಯಿಟ್ಟು ದೇಶಕ್ಕಾಗಿ ಮಡಿದಿದ್ದಾರೆ. ಬ್ರಿಟಿಷರರಿಗೆ ಸಿಂಹ ಸ್ವಪ್ನವಾಗಿದ್ದ ಆತನ ಧೈರ್ಯ, ಸಾಹಸ ಅನೇಕರಿಗೆ ಮಾದರಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಹಾಗಾಗಿ ಮುಂದಿನ ಜಯಂತಿಯ ವೇಳೆಗೆ ರಾಜ್ಯ ಸರ್ಕಾರ ಇಂತಹ ಮಹಾನ್ ನಾಯಕನ ಪುತ್ಥಳಿ ನಿರ್ಮಾಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ: ದೇಗುಲಕ್ಕೆ ದಲಿತರು ಬಂದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ ಸವರ್ಣೀಯರು
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ನಗರಸಭೆಯ ಉಪಾಧ್ಯಕ್ಷ ಸಾಜೀದ್ ಸಮೀರ್, ಮುಖಂಡರಾದ ಡಾ.ರಜಾಕ್ ಉಸ್ತಾದ್, ಬಷಿರುದ್ದೀನ್, ಅಬ್ದುಲ್ ಹೈ ಫೇರೋಜ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಫರೀದ್ ಖಾನ್, ಜಾವೀದ್ ವಕೀಲ್, ತೌಸೀಫ್ ಅಹ್ಮದ್, ಮಹಮ್ಮದ್ ಶಫಿ, ನಜೀರ್ ಸೇರಿದಂತೆ ಇತರರು ಇದ್ದರು.
