ಸೌಕರ್ಯಗಳಿಲ್ಲದೆ ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸುತ್ತಿರುವ ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಸರ್ಕಾರಿ ಬಸ್ ನಿಲ್ದಾಣ, ಇಂದು ಅವ್ಯವಸ್ಥೆಯ ಸಂಕೇತವಾಗಿದೆ. ಬಸ್ ನಿಲ್ದಾಣ ಉದ್ಘಾಟನೆಯಾಗಿ ಐದು ವರ್ಷ ಕಳೆದರೂ ನಿಲ್ದಾಣದ ಶೌಚಾಲಯ ಮಾತ್ರ ಇನ್ನೂ ಬಾಗಿಲು ತೆರೆಯದಿರುವುದೇ ಇದಕ್ಕೆ ಪ್ರಮುಖ ಉದಾಹರಣೆ.
ಪ್ರತಿ ದಿನ ನೂರಾರು ಪ್ರಯಾಣಿಕರು ಸಂಚರಿಸುವ ಬಸ್ ನಿಲ್ದಾಣದಲ್ಲಿ ಅತೀ ಅವಶ್ಯಕ ಸೌಕರ್ಯವಾಗಿರುವ ಶೌಚಾಲಯವೇ ಇಲ್ಲ. ಪ್ರತಿ ನಿತ್ಯ ನೂರಾರು ಬಸ್‌ಗಳ ಓಡಾಟ, ಸದಾ ಜನಸಂದಣಿಯಿಂದ ತುಂಬಿ ತುಳುಕುವ ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ಮೂಲಸೌಕರ್ಯಗಳ ನಿರ್ವಹಣೆ ಇಲ್ಲದೇ ಜನರು ಬಯಲು ಶೌಚಕ್ಕೆ ಮುಂದಾಗಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ.
ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಜನರು ಬರುತ್ತಾರೆ. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಶೌಚಾಲಯದ ಅನುಪಸ್ಥಿತಿ ತೀವ್ರ ತೊಂದರೆಯ ಮೂಲವಾಗಿದೆ. “ಶೌಚಾಲಯ ನೋಡ್ತಿವಿ, ಆದರೆ ಒಳ ಹೋಗೋಕೆ ಸಾಧ್ಯವಿಲ್ಲ. ಇದು ನಗುವಿಗೆ ಕಾರಣವಲ್ಲ, ನೋವಿಗೆ ಕಾರಣ” ಎಂಬುದು ಸ್ಥಳೀಯರ ಆಕ್ರೋಶ.

ಶೌಚಾಲಯದ ಈ ದುರವಸ್ಥೆಯಿಂದ ಬೇಸತ್ತ ಪ್ರಯಾಣಿಕರು ಬಯಲು ಶೌಚ ಆಶ್ರಯಸಿದ್ದಾರೆ. ಬಸ್ ನಿಲ್ದಾಣದ ಕಾಂಪೌಂಡ್‌ಗಳು ಶೌಚಾಲಯಗಳಾಗಿ ಮಾರ್ಪಟ್ಟಿವೆ. ಇದರಿಂದ ಬಸ್ ನಿಲ್ದಾಣದ ಆವರಣ ಗಬ್ಬೆದ್ದು ನಾರುವಂತಾಗಿದೆ. ಮಹಿಳೆಯರು ಮತ್ತು ಮಕ್ಕಳು ನಿಲ್ದಾಣದ ಆವರಣದಲ್ಲಿ ಸಂಚರಿಸದಂತ ವಾತಾವರಣ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಬಗ್ಗೆ ಕಾಲೇಜು ವಿದ್ಯಾರ್ಥಿಯೊಬ್ಬರು ಮಾತನಾಡಿ, “ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕು ಅದರ ಮಧ್ಯೆ ಮೂತ್ರ ವಿಸರ್ಜನೆಗೆ ತೆರಳಬೇಕಾದರೆ ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗಬೇಕಾಗಿದೆ. ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ವಾಸನೆಯಿಂದ ಗಬ್ಬು ನಾರುತ್ತಿದೆ. ಬಸ್ ಬರಲು ತಡವಾದರೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಊಟ ಸೇವಿಸುತ್ತೇವೆ. ದುರ್ವಾಸನೆಯಿಂದ ಸೊಳ್ಳೆಗಳು ಹೆಚ್ಚಾಗಿ ಬಸ್ ನಿಲ್ದಾಣದ ಹೊರಗಡೆ ನಿಲ್ಲುವಂತಾಗಿದೆ” ಎಂದರು.
“ಅದೇನೋ ಬಸ್ ಬರುವವರೆಗೂ ಎರಡು ಗಂಟೆ ಕಾಯಬೇಕಾಯಿತು. ಈ ವೇಳೆ ಬರುವ ನೈಸರ್ಗಿಕ ಕರೆಗೆ ಪಕ್ಕದ ಬೇಸಾಯದ ಜಮೀನಿಗೋ ಹತ್ತಿರದ ಬಡಾವಣೆಗೋ ಓಡಬೇಕಾಗಿದೆ. ಇದು ಮಹಿಳೆಯರಿಗೆ ಅತ್ಯಂತ ಅವಮಾನಕಾರಿಯಾಗಿದೆ. ಶೌಚಾಲಯ ಇಲ್ಲದಿದ್ದರೆ ಏನೋ ಬೇರೆ ವ್ಯವಸ್ಥೆ ಅಥವಾ ಸಿದ್ದತೆ ಮಾಡಿಕೊಳ್ಳಬಹುದು. ಆದರೆ ಇದ್ದೂ ಇಲ್ಲದಂತಿರುವ ಈ ವ್ಯವಸ್ಥೆಗೆ ಏನು ಹೇಳುವುದು? ಇದ್ಯಾವುದೂ ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ವಿಪರ್ಯಾಸ” ಎನ್ನುತ್ತಾರೆ ದಿನನಿತ್ಯ ಪ್ರಯಾಣಿಸುವ ಮಹಿಳೆ ಸವಿತಾ.

ಸ್ಥಳೀಯ ಹಿರಿಯ ಹೋರಾಟಗಾರ ಭೀಮರಾಯ ನಾಯ್ಕ್ ಮಾತನಾಡಿ, “ತಾಲ್ಲೂಕು ಘೋಷಣೆಯಾಗಿ ಸುಮಾರು 5 ವರ್ಷ ಕಳೆದಿದೆ. ಬಸ್ ನಿಲ್ದಾಣ ಉದ್ಘಾಟನೆಯಾದಾಗ ಶೌಚಾಲಯ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಳಕೆಯಿಲ್ಲದೇ ಹಾಳು ಬಿದಿದ್ದೆ. ನೂರಾರು ಮಹಿಳೆಯರಿಗೆ ತುಂಬಾ ಸಮಸ್ಯೆಯಾಗಿದೆ. ಬಸ್ ನಿಲ್ದಾಣ ಅವ್ಯವಸ್ಥೆಯಿಂದ ಗಬ್ಬು ನಾರುತ್ತಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ” ಎಂದರು.
ಇದನ್ನೂ ಓದಿ: ರಾಯಚೂರು | ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿ; ಕೆಪಿಆರ್‌ಎಸ್ ಖಂಡನೆ
ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ಲಕ್ಷಾಂತರ ರೂ ವ್ಯಯ ಮಾಡುತ್ತಿದೆ. ಈ ಬಸ್ ನಿಲ್ದಾಣ ಯಾಕೋ ಸ್ವಚ್ಛತೆಯಿಂದ ವಂಚಿತಗೊಂಡಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಬೇಗನೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಕೇರಾ ಬಂದ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
“ಇದು ಕೇವಲ ಶೌಚಾಲಯದ ಬಗ್ಗೆ ಅಲ್ಲ. ಇದು ಗೌರವದ, ಆರೋಗ್ಯದ ಮತ್ತು ಮಾನವೀಯ ಹಕ್ಕಿನ ಪ್ರಶ್ನೆ. ಅರಕೇರಾ ಬಸ್ ನಿಲ್ದಾಣದ ಸ್ಥಿತಿ ಕಡೆಗೆ ಸಂಬಂಧಪಟ್ಟವರು ಕಣ್ಣು ಹಾಯಿಸಬೇಕು. ಕೂಡಲೇ ಸಂಬಂಧಿತ ಇಲಾಖೆ ಕ್ರಮ ಕೈಗೊಂಡು, ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ತೆರೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಶೌಚಾಲಯದ ಬಾಗಿಲು ತೆರೆಯುವುದು ಅಷ್ಟೇನೂ ದೊಡ್ಡ ಕಾರ್ಯವಲ್ಲ; ಆದರೆ ಅದನ್ನು ತೆರೆಯುವ ನಿರ್ಧಾರವು ನೂರಾರು ಜನರ ಗೌರವವನ್ನು ಉಳಿಸುವ ಮಹಾ ಕಾರ್ಯವಾಗಲಿದೆ ಎಂಬುದು ಪ್ರತಿ ನಾಗರಿಕನ ಆಗ್ರಹ!”