ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಕಾಮಗಾರಿಯನ್ನು ತ್ವರಿತಗೊಳಿಸುವುದು ಸೇರಿದಂತೆ ರೈತರ ಜ್ವಲಂತ ಸಮಸ್ಯೆಗಳ ವಿರುದ್ಧ ಸೆ. 8 ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ರೈತ ಸಂಘಟನೆಯ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.
ಅವರು ಗುರುವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಅಪಾರ ಪ್ರಮಾಣದ ನೀರು ನೆರೆಯ ರಾಜ್ಯಕ್ಕೆ ಹರಿದು ಹೋಗಿತ್ತು. ಈಗ ಶಿಥಿಲವಾಗಿರುವ ಗೇಟ್ ಅಳವಡಿಕೆ ಟೆಂಡರ್ ಕರೆಯಲಾಗಿದ್ದು ನಿಧಾನಗತಿಯಿಂದ ಕೆಲಸ ನಡೆಯುತ್ತಿದೆ. ಸಕಾಲಕ್ಕೆ ಗುತ್ತಿಗೆದಾರರಿಗೆ ಹಣ ಪಾವತಿಸಿದರೆ ವೇಗವಾಗಿ ಕಾಮಗಾರಿ ಮುಗಿದು ರೈತರಿಗೆ ಅನುಕೂಲವಾಗಲಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಬೇಸಿಗೆ ಬೆಳೆಗೆ ನೀರಿಲ್ಲ ಎಂದು ಹೇಳುತ್ತದ್ದಾರೆ. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ರೈತರು ಸಂಕಷ್ಟಕ್ಕೆ ಈಡಾಗುವಂತಾಗಿದೆ ಎಂದು ಆರೋಪಿಸಿದರು.
ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಮುಂದಾಗುತ್ತಿಲ್ಲ. ನವಲಿ ಜಲಾಶಯವೂ ನಿರ್ಮಾಣ ಮಾಡುತ್ತಿಲ್ಲ. ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಸರ್ಕಾರದೊಂದಿಗೆ ಚರ್ಚಿಸಲು ವರ್ಷಗಳು ಉರುಳಿ ಹೋಗುತ್ತಿವೆ. ಯಾವುದೇ ನಿರ್ಧಾರಕ್ಕೆ ಸರ್ಕಾರ ಬರುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ನೀರು ನಿರ್ವಹಣೆ ಸಾಧ್ಯವಾಗದೇ ಹೋಗಿದೆ. ಕಳೆದ ಜುಲೈ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಿದರೆ ಸೆಪ್ಟೆಂಬರ್‌ನಲ್ಲಿ ಸಿರವಾರಕ್ಕೆ ನೀರು ಬಂದಿದೆ. ಅನಧಿಕೃತ ನೀರಾವರಿ ತಡೆಯಲು ಕಾನೂನು ರೂಪಿಸಿದ್ದರೂ ಜಾರಿಗೊಳಿಸುತ್ತಿಲ್ಲ. ಅಚ್ಚುಕಟ್ಟು ವ್ಯಾಪ್ತಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ನಾಲ್ಕು ಜಿಲ್ಲೆಗಳು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳ, ವರ್ತಕರು, ವ್ಯಾಪಾರಸ್ಥರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನ ಭೂಮಿಯಿಲ್ಲದೇ ಅಂತ್ಯಸಂಸ್ಕಾರಕ್ಕೆ ಸಂಕಟ
ಮಾಜಿ ಶಾಸಕ ಗಂಗಾಧರ ನಾಯಕ, ಶರಣಪ್ಪಗೌಡ ಜಾಡಲದಿನ್ನಿ, ಬೂದೆಯ್ಯ ಸ್ವಾಮಿ, ವೈ.ಬಸನಗೌಡ ಉಪಸ್ಥಿತರಿದ್ದರು.
