ಹೋರಾಟದ ಸಂಗಾತಿ ಗೌರಿಗೊಂದು ಪ್ರೀತಿಯ ಪತ್ರ

Date:

ಎಂಟು ವರ್ಷಗಳ ಹಿಂದೆ, ಹಿಂದುತ್ವ ಮತಾಂಧರುಗಳು ನಿನ್ನ ಮಾತುಗಳನ್ನೂ, ನೀನು ನಂಬಿ ಹೋರಾಡುತ್ತಾ ಬಂದ ತತ್ವಗಳನ್ನೂ ಮುಗಿಸಿಬಿಡಬಹುದು ಎಂದುಕೊಂಡು ನಿನಗೆ ಹೊಡೆದ ಗುಂಡಿನ ಮಾರ್ದನಿ ಇನ್ನೂ ಕೇಳಿಸುತ್ತಿದೆ. ಹಾಗೆ ನೋಡಿದರೆ ನಿನ್ನ ದೇಹದ ಮೇಲೆ ಗುಂಡು ಹಾರುತ್ತಿದ್ದಂತೆಯೇ, ನೀನು ಬಹಳ ಎತ್ತರಕ್ಕೆ ಹೋಗಿಬಿಟ್ಟೆ. ನಿನ್ನ ಧ್ವನಿ, ನಿನ್ನ ನೋವು, ನಿನ್ನ ಆಕ್ರೋಶ, ನಿನ್ನ ಜನಪ್ರೀತಿ ಆ ಕ್ಷಣದಲ್ಲಿಯೇ ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾಯಿತು…

- Advertisement -

ಪ್ರೀತಿಯ ಸಂಗಾತಿ ಗೌರಿಗೆ,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ನಿನ್ನನ್ನು ನಮ್ಮಿಂದ ಅಗಲಿಸಿ ಆಗಲೇ ಎಂಟು ವರ್ಷಗಳಾಗಿ ಹೋದವು. ಕಾಲ ಹೇಗೆ ಓಡುತ್ತದೆ! ಮತ್ತು ಈ ಎಂಟು ವರ್ಷಗಳಲ್ಲಿ ಏನೇನು ನಡೆದು ಹೋಗಿದೆ? ನೀನಿದ್ದಾಗಲೇ ಪ್ರಾರಂಭವಾಗಿದ್ದ ಭಾರತದ ಪ್ರಜಾಪ್ರಭುತ್ವದ ಅವನತಿ ಇಂದು ಇನ್ನೂ ಇಳಿಜಾರಿನಲ್ಲಿದೆ. ಮಾನವ ಹಕ್ಕುಗಳ ಬಗ್ಗೆ ಮಾತನಾಡುವವರು ದೇಶದ್ರೋಹಿಗಳಾಗಿದ್ದಾರೆ; ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರು ಈ ದೇಶದ ಸಂಪ್ರದಾಯಕ್ಕೆ ಹೊರತಾದ ಪಶ್ಚಿಮದ ಸಂಸ್ಕೃತಿಯ ದಾಸಿಯರಾಗಿಬಿಟ್ಟಿದ್ದಾರೆ. ವಿಶ್ವ ವಿದ್ಯಾಲಯದ ಅಧ್ಯಾಪಕರು ಮೌನ ವ್ರತ ಹಿಡಿದಿದ್ದಾರೆ. ಪತ್ರಕರ್ತರು ಆಡಳಿತ ವರ್ಗದವರ ತಾಳಕ್ಕೆ ಕುಣಿಯುವುದನ್ನು ವೃತ್ತಿಪರ ಕಲೆಯನ್ನಾಗಿಸಿಕೊಂಡಿದ್ದಾರೆ; ಈ ಮಧ್ಯೆ ಪತ್ರಿಕಾ ಸ್ವಾತಂತ್ರವನ್ನು ಹೇಗಾದರೂ ಮಾಡಿ ಜೀವಂತ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕೆಲವೇ ಬೆರಳಷ್ಟು ಪತ್ರಿಕೆ, ಟಿವಿ ಚಾನೆಲ್ಲುಗಳ ಮೇಲೆ ರಾಜಾರೋಷವಾಗಿ ಇ.ಡಿ ದಾಳಿ, ಹಣ ದುರುಪಯೋಗದ ನೆಪದಲ್ಲಿ ಕಾನೂನು ಕ್ರಮ ಜಾರಿಯಾಗುತ್ತಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಜಾತಂತ್ರವನ್ನು ಎತ್ತಿ ಹಿಡಿಯಬೇಕಾದ ಸ್ವತಂತ್ರ ಸಂಸ್ಥೆಗಳಾದ ಚುನಾವಣಾ ಆಯೋಗ, ಹಣಕಾಸು ಆಯೋಗ ಇತ್ಯಾದಿಗಳು ಆಡಳಿತ ಪಕ್ಷದ ತಾಳಕ್ಕೆ ಕುಣಿಯುವ ಆಸ್ಥಾನ ನೃತ್ಯಪಟುಗಳಾಗಿವೆ. ಸುಪ್ರೀಂ ಕೊರ್ಟಿನ ನ್ಯಾಯಮೂರ್ತಿಗಳ ನೇಮಕದಲ್ಲಿ ನೇರ ಹಸ್ತಕ್ಷೇಪ ನಡೆಯುತ್ತಿದೆ. ತಮಗೆ ಅನುಕೂಲವಾದ ಆದೇಶಗಳನ್ನು ನೀಡಿದವರಿಗೆ ಹಾಡುಹಗಲೇ ಸನ್ಮಾನಗಳು ನಡೆಯುತ್ತಿವೆ. ತೀರಾ ಆತಂಕದ ವಿಷಯ ಎಂದರೆ, ದೇಶದ ಫೆಡರಲ್‌ ಸ್ವರೂಪಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಹೀಗೆ ನೀನು ಇಂದು ರಾಜಾರೋಷವಾಗಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಅವನತಿಯನ್ನು ನೋಡಿ ಇನ್ನಷ್ಟು ವ್ಯಗ್ರಳಾಗುತ್ತಿದ್ದಿ; ನಿನ್ನ ಧ್ವನಿ ಮತ್ತಷ್ಟು ಜೋರಾಗುತ್ತಿತ್ತು.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ನಾಟಕ, ಬಿಹಾರದಲ್ಲಿ ಶುರುವಾಗಿರುವ ಮತದಾರರ ಪರಿಷ್ಕರಣೆ, ಬಾನು ಮುಷ್ತಾಕ್‌ ಅವರು ಏನು ಧರಿಸಬೇಕು, ಯಾವ ಬೆಟ್ಟಕ್ಕೆ ಹೋಗಬಾರದು ಎನ್ನುವ ಫತ್ವಾ, ನಿನ್ನ ಪ್ರೀತಿಯ ಮಗ ಉಮರ್‌ ಖಾಲಿದ್‌ ಮುಂತಾವದರು ಜಾಮೀನು ಸಿಗದೆ, ಇನ್ನೂ ವಿನಾಕಾರಣ ಜೈಲಿನಲ್ಲಿರುವಂತೆ ಮಾಡಿರುವ ನಮ್ಮ ನ್ಯಾಯ ವ್ಯವಸ್ಥೆ… ಇತ್ಯಾದಿ ಅನಿಷ್ಟ ಬೆಳವಣಿಗೆಗಳು ನಿನ್ನನ್ನು ಮನೆಗೇ ಹೋಗದಂತೆ ಹೋರಾಟದಲ್ಲಿ ಮುಳುಗಿಸಿಬಿಡುತ್ತಿದ್ದವು.

ಈ ಮಧ್ಯೆ ದೇವನಹಳ್ಳಿಯಲ್ಲಿ ಅಪರೂಪಕ್ಕೆ ಸಿಕ್ಕ ಜಯ; ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಳಮೀಸಲಾತಿಯ ಜಾರಿ (ಅದರ ಎಲ್ಲಾ ಅಸಮರ್ಪಕತೆಗಳನ್ನು ಒಳಗೊಂಡಂತೆ) ನಿನ್ನನ್ನು ಮತ್ತಷ್ಟು ಹುರಿದುಂಬಿಸುತ್ತಿದ್ದವು ಕೂಡ.

ಹಾಗೆಂದೇ ನಾವು ನಿನ್ನ ಹೆಸರಿನ ಟ್ರಸ್ಟ್‌ ಮೂಲಕ ನಿನ್ನ ಆಶಯಕ್ಕೆ ಪೂರಕವಾಗುವ, ಪ್ರಜಾತಂತ್ರದ ಹಿರಿಮೆಯನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ದಕ್ಷಿಣದ ಕೇರಳದಿಂದ ಹಿಡಿದು, ಈಶಾನ್ಯದ ಮೇಘಾಲಯದವರೆಗೆ ಬಂದ ಅತಿಥಿಗಳು ನಿನ್ನನ್ನು ನೆನಪಿಸಿಕೊಂಡಿದ್ದಾರೆ. ಹಾಗೆಯೇ ಈ ಬಾರಿ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ʼಮತದಾರರ ವಿಶೇಷ ಸಮಗ್ರ ಪರಿಷ್ಕರಣೆʼ ಹೆಸರಿನಲ್ಲಿ ಮತ್ತೊಮ್ಮೆ ಎನ್‌.ಆರ್‌.ಸಿ.ಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸಲು ನಡೆಯುತ್ತಿರುವ ಪ್ರಕ್ರಿಯೆಯು ಹೇಗೆ ನಮ್ಮ ಇಡೀ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಸಡಿಲಗೊಳಿಸುತ್ತಿದೆ ಎಂಬ ವಿಚಾರ ಕುರಿತು, ಸಂಜಯ ಹೆಗಡೆ, ನಮ್ಮವರೇ ಆದ ದಿನೇಶ ಅಮೀನ ಮಟ್ಟು ಮಾತನಾಡಲಿದ್ದಾರೆ. ನೀನು ಹೇಗೂ ಅಲ್ಲಿರುತ್ತೀ ಎಂಬ ಭರವಸೆ ನಮ್ಮದು. ನಿನ್ನ ಧ್ವನಿಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಗೊಳಿಸುವಂತೆ ಅಂದು ನಿನ್ನ ಎಲ್ಲ ಅಭಿಮಾನಿಗಳು, ಟೀಕಾಕಾರರು ಕೂಡ ಎಲ್ಲ ಅಲ್ಲಿ ಸೇರಲಿದ್ದಾರೆ.

ಎಂಟು ವರ್ಷಗಳ ಹಿಂದೆ, ಹಿಂದುತ್ವ ಮತಾಂಧರುಗಳು ನಿನ್ನ ಮಾತುಗಳನ್ನೂ, ನೀನು ನಂಬಿ ಹೋರಾಡುತ್ತಾ ಬಂದ ತತ್ವಗಳನ್ನೂ ಮುಗಿಸಿಬಿಡಬಹುದು ಎಂದುಕೊಂಡು ನಿನಗೆ ಹೊಡೆದ ಗುಂಡಿನ ಮಾರ್ದನಿ ಇನ್ನೂ ಕೇಳಿಸುತ್ತಿದೆ. ಹಾಗೆ ನೋಡಿದರೆ ನಿನ್ನ ದೇಹದ ಮೇಲೆ ಗುಂಡು ಹಾರುತ್ತಿದ್ದಂತೆಯೇ, ನೀನು ಬಹಳ ಎತ್ತರಕ್ಕೆ ಹೋಗಿಬಿಟ್ಟೆ. ನಿನ್ನ ಧ್ವನಿ, ನಿನ್ನ ನೋವು, ನಿನ್ನ ಆಕ್ರೋಶ, ನಿನ್ನ ಜನ ಪ್ರೀತಿ ಆ ಕ್ಷಣದಲ್ಲಿಯೇ ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾಯಿತು. ನೀನು ಜೀವಿಸಿರುವಾಗ ಕಂಡಿರದ, ಕಾಣದ – ಕೇವಲ ಈ ನಾಡು ಮತ್ತು ದೇಶವಲ್ಲದೆ, ಜಾಗತಿಕ ಮಟ್ಟದಲ್ಲಿ- ಲಕ್ಷಾಂತರ ಜನರ ಬೆಂಬಲ, ನಿಟ್ಟುಸಿರು, ಪ್ರೀತಿಯನ್ನು ಅಲ್ಲಿಂದಲೇ ನೋಡಿರುತ್ತೀಯ. ವ್ಯಂಗ್ಯವೆಂದರೆ, ನಿನ್ನನ್ನು ಚೆನ್ನಾಗಿ ಬಲ್ಲ, ನೀನು ಬಹುವಾಗಿ ಇಷ್ಟಪಡುತ್ತಿದ್ದ ನಿನ್ನ ಅನೇಕ ಗೆಳೆಯ-ಗೆಳತಿಯರು, ನಿನ್ನನ್ನು ದೊಡ್ಡ ಧ್ವನಿಯ, ಮೆಲುಮಾತುಗಳಲ್ಲಿ ಹೇಳಬಹುದಾದ್ದನ್ನು ಚೀರಿ ಹೇಳುವ ವ್ಯಕ್ತಿ ಎಂದು ಪ್ರೀತಿಯಿಂದಲೇ ಟೀಕಿಸುತ್ತಿದ್ದರು. ಇದು ಕೇವಲ ಅವರ ಸ್ವಂತ ಧ್ವನಿಯಾಗಿರದೆ ನಮ್ಮ ಅನಿಸಿಕೆಗಳನ್ನು ಆದಷ್ಟು ಸೂಕ್ಷ್ಮವಾಗಿ, ಸಾಧ್ಯವಾದರೆ ದ್ವಂದ್ವಾತ್ಮಕವಾಗಿ ಹೇಳುವುದೇ ಹೆಚ್ಚು ಮೌಲ್ಯಾತ್ಮಕ ಎಂದು ಭಾವಿಸುವ ಕನ್ನಡ ಸಂಸ್ಕೃತಿಯ ಯಾವತ್ತೂ ನಿಲುವಿನ ಅಭಿವ್ಯಕ್ತಿಯೂ ಆಗಿತ್ತು. ಆದರೆ, ನಿನ್ನನ್ನು ನೆನೆವಾಗ ಜನಮಾನಸದಿಂದ ಮೂಡಿಬಂದ ʼನಾವೆಲ್ಲಾ ಗೌರಿ, ನಾನೂ ಗೌರಿʼ ಘೋಷಣೆಗೆ ಹಿಂದೆಂದೂ ಇಲ್ಲದ ಹೊಸ ಶಕ್ತಿ, ಕಸುವು, ರೋಷ ಮತ್ತು ಅನನ್ಯ ಪ್ರೀತಿ ಸೇರಿಕೊಂಡು ನಮ್ಮ ಹೋರಾಟಕ್ಕೇ ಹೊಸ ಭಾಷ್ಯ ಬರೆಯಿತು.

naanu gauri

ಇದು ಕನ್ನಡ ಜನಪದ ನಿನ್ನನ್ನು ತನ್ನೊಳಗೆ ಇಳಿಸಿಕೊಂಡ ಪರಿ. ನೀನು ಕನ್ನಡಕ್ಕೆ ನೀಡಿದ ದೊಡ್ಡ ಕಾಣಿಕೆಗಳಲ್ಲಿ ಒಂದು. ನಿನ್ನ ನೆನಪಿಗೆ, ನೀನು ಬದುಕಿದ ಮೌಲ್ಯಕ್ಕೆ, ನಿನ್ನನ್ನು ಕಳೆದುಕೊಂಡ ದುಃಖಕ್ಕೆ ಜನ ಎಲ್ಲೆಲ್ಲಿಂದಲೋ ಧ್ವನಿ ಗೂಡಿಸಿದರು. ಆ ಮೆರವಣಿಗೆಯಲ್ಲಿ, ನಂತರ ಗೌರಿ ಸ್ಮಾರಕ ಟ್ರಸ್ಟ್‌ ನಡೆಸಿದ ಒಂದೊಂದು ಸಮಾವೇಶದಲ್ಲೂ ಸೇರಿದ ಜನಸಂದಣಿಯನ್ನು ನೋಡಿ, ʼನೋಡೋ, ನಾನು ಎಷ್ಟು ಪಾಪ್ಯುಲರ್!‌ʼ ಎಂದು ನೀನು ನಿನ್ನ ಕಣ್ಣು ಮಿಟಿಕಿಸಿ, ಜಂಭದ ಇನಿತೂ ಹಂಗಿಲ್ಲದೆ ನಮಗೆ ಹೇಳುವುದನ್ನು ನಾವು ಮೌನದಲ್ಲಿ ಕೇಳಿಸಿಕೊಂಡಿದ್ದೇವೆ. ಕಿಕ್ಕಿರಿದ ಸಭೆಯಲ್ಲಿ ವಿವಿಧ ರೀತಿಯ ಸಂಗೀತ, ಭಾಷಣಗಳ ಮಧ್ಯೆ ಕೂಡ, ಹಿನ್ನೆಲೆಯಲ್ಲಿದ್ದ ನಿನ್ನ ಚಿತ್ರ ನೋಡುತ್ತಾ, ಎಲ್ಲೋ ಮೂಲೆಯಲ್ಲಿ ನಿಂತು ಎರಡು ಹನಿ ಕಣ್ಣೀರು ಹಾಕಿದ್ದೇವೆ. ಅದರಲ್ಲೂ ಕೀಮೋಥೆರಪಿ ಮಾಡಿಸಿಕೊಂಡು ಹೈರಾಣಾಗಿದ್ದ ಹಿರಿಯ ಎ ಕೆ ಸುಬ್ಬಯ್ಯನವರು ಹಾಗೂ ಮೂಗಿಗೆ ಆಮ್ಲಜನಕದ ನಳಿಕೆ, ಅದರ ಜತೆ ಇರುವ ಸಿಲಿಂಡರ್‌ ಹೊತ್ತುಕೊಂಡೇ, ನಾನೂ ನಗರ ನಕ್ಸಲ್‌ ಎಂಬ ಪ್ಲಕಾರ್ಡನ್ನು ತಗುಲಿ ಹಾಕಿಕೊಂಡು ಬಂದ ಗಿರೀಶ ಕಾರ್ನಾಡರು ಇಡೀ ಸಭೆಯನ್ನು ರೋಮಾಂಚಿತಗೊಳಿಸಿದ್ದನ್ನು ನೋಡಿ ದಂಗಾಗಿದ್ದೇವೆ. ನಿನ್ನ ಪ್ರಿಯ ಗೆಳೆಯ ಪ್ರಕಾಶ ರೈ ಹೇಳಿದ ಪ್ರಕಾರ ನಾವು ಗೌರಿಯನ್ನು ಹೂತಿಲ್ಲ; ಬಿತ್ತಿದ್ದೇವೆ ಎಂಬ ಮಾತನ್ನು ನಿಜ ಮಾಡುವಂತೆ ನೀನು ಪ್ರತಿ ದಿನವೂ ನಮ್ಮಲ್ಲಿ ಬೆಳೆಯುತ್ತಿದ್ದೀಯ. ನೀನು ಬಿಟ್ಟು ಹೋದ ಪತ್ರಿಕೆಯನ್ನು ರೂಪಿಸುತ್ತಿರುವ ಪತ್ರಿಕಾ ತಂಡ ನಿನ್ನನ್ನು ಸದಾ ತನ್ನ ಎದೆಯಲ್ಲಿ ಇರಿಸಿಕೊಂಡು, ತನ್ನೆಲ್ಲಾ ಕಷ್ಟ-ನಷ್ಟಗಳ ನಡುವೆ ನಿನ್ನನ್ನು ಪ್ರತೀ ವಾರ ಓದುಗರತ್ತ ಕೊಂಡೊಯ್ಯುತ್ತಿದೆ. ಅಲ್ಲದೆ ಈ ದಿನ.ಕಾಮ್‌ ಎಂಬ ಅಂತರಜಾಲ ಸಂಚಿಕೆಗಳನ್ನೂ ಹೊರತರುತ್ತಿದೆ. ಈಗ ನೀನೊಬ್ಬ ಐಕಾನ್‌, ನಮ್ಮ ಸುಪ್ತ ಪ್ರಜ್ಞೆಯ ಪ್ರತೀಕ. ಅಭಿವ್ಯಕ್ತಿ ಸ್ವಾತಂತ್ರ, ಮುಕ್ತ ಚಿಂತನೆಯ ಹೋರಾಟಕ್ಕೆ ಕನ್ನಡನಾಡು ನೀಡಿರುವ ಜಾಗತಿಕ ಕೊಡುಗೆ.

ಇಡೀ ಜಗತ್ತಿನಲ್ಲಿ ಕೋವಿಡ್‌ ಎಂಬ ಕಣ್ಣಿಗೆ ಕಾಣದ ಮಹಾ ವೈರಸ್‌ ಆವರಿಸಿದ್ದನ್ನು, ಅದರಿಂದ ಜನರು, ಅದರಲ್ಲೂ ದುಡಿಯುವ ಜನರು, ಹೇಗೆ ಹಿಂದೆಂದೂ ಕಂಡರಿಯದ ಬವಣೆಗೆ ತುತ್ತಾದ್ದನ್ನೂ ನೀನು ನೋಡಿರುತ್ತೀಯಾ. ಅದು ಎಷ್ಟೋ ಜನರನ್ನು ಬಲಿ ತೆಗೆದುಕೊಂಡು ಹೇಗೋ ಕಡೆಗೆ ಕೊನೆ ಆಯಿತು. ಆದರೆ, ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಬಲಪಂಥೀಯ ವೈರಸ್‌ ತೊಲಗಬೇಕಾದರೆ, ಅದನ್ನು ಬುಡಸಮೇತ ಕಿತ್ತುಹಾಕಬಹುದಾದ ವ್ಯಾಕ್ಸಿನ್‌ ತಯಾರಾಗಬೇಕಾದರೆ, ಇನ್ನೊಂದು ಕ್ರಾಂತಿಯೇ ಆಗಬೇಕು. ಅದಕ್ಕೆ ದೊಡ್ಡಮಟ್ಟದ, ದೊಡ್ಡ ಧ್ವನಿಯ ಹೋರಾಟವೇ ಬೇಕು. ಕೆಲವರ ಈ ಚೀರಾಟ, ಜನರ ಹೋರಾಟದ ಮೂಲಕ ಎಲ್ಲರ ಧ್ವನಿಯಾದಾಗ, ಅದುವೇ ಹೊಸ ಕಾಲದ ಕಾವ್ಯವಾಗುವುದು; ನಮ್ಮ ಸಂಸ್ಕೃತಿಯ ಹೆಮ್ಮೆಯ ಭಾಗವಾಗುವುದು.

WhatsApp Image 2025 09 04 at 1.53.39 PM
2002ರಲ್ಲಿ ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್‌ಗಿರಿಗೆ ಭೇಟಿ ನೀಡಿದ ತಂಡದಲ್ಲಿ ಗೌರಿ ಲಂಕೇಶ್‌ (ಪ್ರೊ ವಿ ಎಸ್‌ ಶ್ರೀಧರ್‌, ಡಾ ಗಿರೀಶ್‌ ಕಾರ್ನಾಡ್‌, ಕಲ್ಕುಳಿ ವಿಠಲ ಹೆಗಡೆ, ಜಿ ಕೆ ಗೋವಿಂದರಾವ್‌, ಡಾ ಕೆ ಮರುಳಸಿದ್ದಪ್ಪ, ಕೆ ಎಲ್‌ ಅಶೋಕ್‌, ಹೇಮಾ ಸಿರಿಮನೆ ಮತ್ತಿತರರು ಇದ್ದಾರೆ).

ದೇಶವೊಂದು ಮುಂದುವರೆಯುವುದಕ್ಕೆ ಪ್ರಜಾತಂತ್ರವೇ ಮೂಲ ಮಂತ್ರ ಮತ್ತು ಅಗತ್ಯ ಎನ್ನುವುದನ್ನು ನಾವು ಮತ್ತೆ ಮತ್ತೆ ಹೇಳುವ ಜರೂರು ಹಿಂದೆಗಿಂತಲೂ ಈಗ ಇನ್ನಷ್ಟು ಹೆಚ್ಚಾಗಿದೆ. ಇದು ಇನ್ನೂ ಮುಂದೆ ಹೋಗಿ, ಪ್ರಜಾಪ್ರಭುತ್ವದ ಬಗೆಗಿನ ಕಾಳಜಿ ನಮ್ಮ ದೈನಿಕದ ಭಾಗವಾಗಬೇಕಾಗಿದೆ. ಅದು ನಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಶಾಲೆ ಕಾರ್ಖಾನೆಗಳಲ್ಲಿ ಸಾಧ್ಯವಾಗಬೇಕಿದೆ. ಇದರಿಂದ ಮಾತ್ರ ಜನ, ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ತಮ್ಮ ಚರಿತ್ರೆಯನ್ನು ತಾವೇ ಬರೆದುಕೊಳ್ಳಬಲ್ಲರು; ತಮ್ಮ ಸಮಾಜವನ್ನು ತಾವೇ ಕಟ್ಟಿಕೊಳ್ಳಬಲ್ಲರು. ನಿನ್ನ ಬದುಕೇ ಅದಕ್ಕೆ ಒಂದು ʼಜೀವಂತʼ ಉದಾಹರಣೆ. ಎಲ್ಲೋ ಇಂಗ್ಲಿಷ್‌ ಪತ್ರಿಕೋದ್ಯಮದಲ್ಲಿ ಮುಳುಗಿಹೋಗಿದ್ದ ನೀನು, ಅಲ್ಲೇ ಇನ್ನೂ ಆಳವಾಗಿ ಬೇರೂರುವ ಸಾಧ್ಯತೆಗಳಿದ್ದರೂ, ಅದನ್ನೆಲ್ಲಾ ತೊರೆದು, ಕನ್ನಡಕ್ಕೆ, ಕರ್ನಾಟಕಕ್ಕೆ ಮರಳಿ ಬಂದೆ. ಹೊಸದಾಗಿ ಭಾಷೆ ಕಲಿತೆ, ಇಲ್ಲಿನ ಹೋರಾಟದಲ್ಲಿ ಧುಮುಕಿ ನಿನಗೇ ಅಚ್ಚರಿಯಾಗುವ ಹಾಗೆ ಬೆಳೆದೆ. ಜಾಗತೀಕರಣದ ಹುನ್ನಾರಗಳನ್ನು ಅಭ್ಯಾಸ ಮಾಡಿ, ಸ್ಥಳೀಯವಾಗಿ ಬೇರುಬಿಡುತ್ತಲೇ, ಜಾಗತಿಕ ಮಟ್ಟದ ವಿದ್ಯಮಾನಗಳನ್ನು ಅರಿತುಕೊಳ್ಳುವ, ಅವುಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ವಿಶ್ಲೇಷಿಸುವ ದಾರಿಯಲ್ಲಿ ನಡೆಯತೊಡಗಿದೆ. ಈಗ ಆ ದಾರಿ ಇನ್ನಷ್ಟು ದೂರವಾಗಿದೆ. ಆದರೆ ಆ ದಾರಿಯಲ್ಲಿರುವ ಅಡಚಣೆಗಳು ಅನುಭವಕ್ಕೆ ಬರತೊಡಗಿವೆ. ಈ ದಾರಿಯಲ್ಲಿ ನಾವು ಮೊದಲು ಎದುರಿಸಬೇಕಾಗಿದ್ದು ಈಗ ನಾವಿರುವ ಫ್ಯಾಸಿಸ್ಟ್ ಪ್ರಭುತ್ವವನ್ನು ಮತ್ತು ಫ್ಯಾಸಿಸಂ ಅನ್ನು ಎದುರಿಸುವುದೆಂದರೆ, ಖಾಸಗೀಕರಣವನ್ನು ಮತ್ತು ಖಾಸಗಿ ಬಂಡವಾಳವನ್ನು ವಿರೋಧಿಸುವುದು ಎಂದೇ ಅರ್ಥ. ಒಂದನ್ನಿಟ್ಟುಕೊಂಡು ಇನ್ನೊಂದನ್ನು ಮಾತ್ರ ವಿರೋಧಿಸುವುದು ಗಾಯಕ್ಕೆ ಮುಲಾಮು ಹಚ್ಚಿದಂತೆಯೇ ಹೊರತು, ವೃಣಗಳಿಗೆ ಕಾರಣವಾದ ದೇಹದಲ್ಲೇ ಹುದುಗಿರುವ ರೋಗಾಣುಗಳನ್ನು ನಾಶಪಡಿಸಿದಂತಲ್ಲ.

ಇನ್ನು ಫ್ಯಾಸಿಸಂನ ಎರಡನೇ ಲಕ್ಷಣವೆಂದರೆ ಬಹುತ್ವವನ್ನು ನಾಶಪಡಿಸಿ, ವಿಭಿನ್ನತೆಯನ್ನು ಹತ್ತಿಕ್ಕಿ, ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಈ ಕ್ರಮಗಳನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವುದು; ಚುನಾವಣೆಯಲ್ಲಿ ಬಹುಮತದಿಂದ ಗೆದ್ದುಬರುವುದನ್ನೇ ಪ್ರಜಾಪ್ರಭುತ್ವದ ದಿಗ್ವಿಜಯ ಎಂದು ಒಣ ಹೆಮ್ಮೆಪಟ್ಟುಕೊಳ್ಳುವುದು. ಎರಡು ಚುನಾವಣೆಗಳ ಮಧ್ಯದ ಅವಧಿಯಲ್ಲಿ ಏನಾಗಬೇಕು ಎನ್ನುವುದು ಪ್ರಜಾತಂತ್ರವನ್ನು ಗಟ್ಟಿಗೊಳಿಸುವುದೇ ವಿನಃ, ಕೇವಲ ʼಒಂದು ದೇಶ, ಒಂದು ಚುನಾವಣೆʼ ಎನ್ನುವ ಘೋಷಣೆಯಲ್ಲ.

ಇದನ್ನೂ ಓದಿ ಗೌರಿ ನೆನಪು | ಅವಳೊಂದು ಶುಭ್ರ ಹೂವಿನಂತೆ

ಗೆಳತೀ, ನೀನು ಹೊರಟು ಹೋದ ನಂತರದ ಭಾರತದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹಳೆಯ ಚಾಳಿಗಳು ಹೊಸ ಸ್ವರೂಪದಲ್ಲಿ ನೇಪಥ್ಯಕ್ಕೆ ಬಂದಿವೆ. ಕೋಮುವಾದ ಕೇವಲ ಧಾರ್ಮಿಕ ಮೂಲಭೂತವಾದಕ್ಕೆ ಸೀಮಿತವಾದುದಲ್ಲ ಎನ್ನುವುದು ನೀನಿದ್ದಾಗಲೇ ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯ. ಅದು ಈಗ ಭಾರತದ ಫ್ಯಾಸಿಸಂನ ವಿಶಿಷ್ಟ ಲಕ್ಷಣವಾಗಿ ಬೆಳೆದು ನಿಂತಿದೆ. ಇವೆಲ್ಲಾ ಬೆಳವಣಿಗೆಗಳಿಗೆ ನೀನು ಸಾಕ್ಷಿಯಾಗಿದ್ದಿ ಮತ್ತು ಇಲ್ಲಿನ ಪ್ರಜಾಪ್ರಭುತ್ವಕ್ಕಾಗಿ ನಡೆಯುವ ಮತ್ತು ನಡೆಯಬೇಕಾದ ಹೋರಾಟಗಳಿಗೆ ಅಲ್ಲಿಂದಲೇ ನೀನು ನಮ್ಮ ಜತೆಯಾಗಿರುತ್ತಿ ಎನ್ನುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ.

ಇಷ್ಟು ಮಾತುಗಳನ್ನು ನಿನ್ನಲ್ಲಿ ಹಂಚಿಕೊಳ್ಳಬೇಕೆನಿಸಿತು. ಇದು ನಿನಗೆ ತಿಳಿದಿರಲಾರದು ಎನ್ನುವುದಕ್ಕಲ್ಲ; ನಿನ್ನ ಮೂಲಕ ನಮ್ಮನ್ನು ನಾವು ಮತ್ತೊಮ್ಮೆ ಎಚ್ಚರಗೊಳಿಸುವುದಕ್ಕೆ.

ಎಂದೆಂದೂ
ನಿನ್ನ ಪ್ರೀತಿಯ ಸಂಗಾತಿಗಳ ಪರವಾಗಿ
ವಿ.ಎಸ್.‌ ಶ್ರೀಧರ

WhatsApp Image 2025 11 17 at 4.15.37 PM
ಪ್ರೊ. ವಿ.ಎಸ್.‌ ಶ್ರೀಧರ್‌
+ posts

ನಿವೃತ್ತ ಪ್ರೊಫೆಸರ್‌, ಸಾಮಾಜಿಕ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ವಿ.ಎಸ್.‌ ಶ್ರೀಧರ್‌
ಪ್ರೊ. ವಿ.ಎಸ್.‌ ಶ್ರೀಧರ್‌
ನಿವೃತ್ತ ಪ್ರೊಫೆಸರ್‌, ಸಾಮಾಜಿಕ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...