ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69ರಲ್ಲಿ ಇಂದು 7.5 ಅಡಿ, ಮೈಲ್ 42ರಲ್ಲಿ 11 ಅಡಿ ನೀರು ಸರಬರಾಜು ಆಗುವುದರಿಂದ ಕೆಳಭಾಗದ ಮಾನ್ವಿ, ಸಿರವಾರ, ರಾಯಚೂರಿಗೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಕೂಡಲೇ ಮೈಲ್ 69ರಲ್ಲಿ 8.5ರಿಂದ 9 ಅಡಿ, ಮೈಲ್ 42ರಲ್ಲಿ 12 ಅಡಿ ನೀರಿನ ಪ್ರಮಾಣವನ್ನು ಕಾಯ್ದಿರಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್ ಎಸ್ ಬೋಸರಾಜು ಅವರು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರು, ಜಿಲ್ಲಾಧಿಕಾರಿ ಹಾಗೂ ಕೆಎನ್‌ಎನ್‌ಎಲ್ ಎಂಡಿ ಅವರಿಗೆ ದೂರವಾಣಿ ಮೂಲಕ ಸೂಚಿಸಿದ್ದಾರೆ.
“ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ ವಾರ ಸಮೀಪಿಸಿದರೂ ಇನ್ನೂ ರಾಯಚೂರು ಜಿಲ್ಲೆಗೆ ನೀರು ತಲುಪಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ನೀರಿನ ಪ್ರಮಾಣ ಕಾಯ್ದಿರಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ಆಗಸ್ಟ್ 16ರಂದು ಐಸಿಸಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಯಚೂರು ಜಿಲ್ಲೆಯ ಕೆಳಭಾಗದ ರೈತರ ಜಮೀನುಗಳಿಗೆ ಅನುಗುಣವಾಗಿ ಮೈಲ್ 47, 69, 104ರಲ್ಲಿ ಸಮರ್ಪಕ ನೀರಿನ ಪ್ರಮಾಣ ಕಾಯ್ದಿರಿಸಲು ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಐದು ಅಂಶಗಳ ಪ್ರಗತಿ; ಜಿಲ್ಲೆಗೆ ದೇಶದಲ್ಲಿಯೇ ಮೊದಲ ಸ್ಥಾನ: ಜಿಲ್ಲಾಧಿಕಾರಿ
“ಈಗಾಗಲೇ ಈ ಕುರಿತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣ್ಪಪ್ರಕಾಶ ಪಾಟೀಲ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕೆಎನ್‌ಎನ್‌ಎಲ್ ಎಂಡಿ ಅವರೊಂದಿಗೆ ಮಾತನಾಡಿ ಕೆಳಭಾಗದ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮದ ಕುರಿತು ಚರ್ಚಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.