ತೊಗರಿ ಸೇರಿದಂತೆ ಇತರೆ ಬಿತ್ತನೆ ಬೀಜಗಳ ಗುಣಮಟ್ಟವನ್ನು ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದ್ದು, ತೊಗರಿ ಬಿತ್ತನೆ ಬೀಜದಲ್ಲಿ ಯಾವುದೇ ಲೋಪವಿಲ್ಲವೆಂಬ ವರದಿ ಬಂದಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.
ರಾಯಚೂರು ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, “ಕೃಷಿ ಇಲಾಖೆಯಿಂದ ಪೂರೈಸಲಾಗಿರುವ ಬೀಜಗಳು ಕಳಪೆಯಾಗಿಲ್ಲ. ತೊಗರಿ ಬಿತ್ತನೆ ಮಾಡಿದ ರೈತರಿಗೆ ಅವಧಿಗೆ ಮುಂಚೆ ಇಬ್ಬನಿ ಸುರಿದಿದ್ದರಿಂದ ಇಳುವರಿ ಏರುಪೇರಾಗುತ್ತದಯೇ ಹೊರತು ಕಳಪೆ ಬೀಜವಲ್ಲ ಎಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ವಾತಾವರಣದ ಬದಲಾವಣೆಯಿಂದ ಬಿತ್ತನೆ ಬೀಜಗಳ ಮೇಲೆ ಪ್ರಭಾವವಾಗಿದೆ, ಕಳಪೆಯಾಗಿಲ್ಲ” ಎಂದು ಸ್ಪಷ್ಟನೆ ನೀಡಿದರು.
“ಬೆಳಗಾವಿಯಲ್ಲಿ ನಾಳೆಯಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ಪ್ರತಿಪಕ್ಷಗಳು ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಮುಂದಾದರೆ ಸರ್ಕಾರ ಉತ್ತರ ಕೊಡಲು ಸಿದ್ಧವಾಗಿದೆ. ಆದರೆ ಸುಳ್ಳು ಆರೋಪಗಳನ್ನು ಮಾಡಿ ಚರ್ಚೆ ನಡೆಸದೆ ಅಧಿವೇಶನ ಸಮಯ ಹಾಳಗಾದಂತೆ ಸಹಕರಿಸಬೇಕಿದೆ. ವಕ್ಫ್ ಪ್ರಕರಣ ಸರಿಹೋಗಿದೆ. ಮುಡಾ ಪ್ರಕರಣ ನ್ಯಾಯಾಲಯದಲ್ಲಿದೆ. ಅನಗತ್ಯವಾಗಿ ಚರ್ಚಿಸಿದರೆ ಸದನದ ಸಮಯ ಹಾಳಾಗುತ್ತದೆ” ಎಂದರು.
“ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಿಲ್ಲ. ಅಭಿವೃದ್ದಿಯ ಆಲೋಚನೆಯೂ ಇಲ್ಲ. ಬಸನಗೌಡ ಯತ್ನಾಳ್ ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿಲ್ಲ. ವಕ್ಫ್ ವಿಷಯದಲ್ಲಿ ಬಿಜೆಪಿ ಸರ್ಕಾರದವಿದ್ದಾಗಲೇ 2 ಸಾವಿರ ನೋಟಿಸ್ ನೀಡಲಾಗಿದೆ” ಎಂದರು.
“ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ನಡೆಸಿದರೆ ನಡೆಸಲಿ. ರಾಜಕೀಯ ಪಕ್ಷವಾಗಿ ಸಮಾವೇಶ ನಡೆಸಲು ಸ್ವತಂತ್ರರು. ನಾವೇಕೆ ವಿರೋಧಿಸಬೇಕು. ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಶಕ್ತಿಯೇನು ಎಂಬುದನ್ನು ಜನರು ತಿಳಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬಾಣಂತಿಯರ ಸಾವಿಗೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ
“ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿಎಂ ಬದಲಾವಣೆ ಮಾಡಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದರೆ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದರೆ ಮುಖ್ಯಮಂತ್ರಿ ಬದಲಾಗುವುದಿಲ್ಲ” ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟಿಲ್ ಇಟಗಿ, ಮಹ್ಮದ್ ಶಾಲಂ, ಯೂಸೂಫ್ ಖಾನ್ ಸೇರಿದಂತೆ ಬಹುತೇಕರು ಇದ್ದರು.
