ಜಮೀನಿನಲ್ಲಿದ್ದ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಗೌಡುರ ತಾಂಡದಲ್ಲಿ ಈ ದುರ್ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಪಟ್ಟ ಮಕ್ಕಳಿಬ್ಬರನ್ನು ಮಂಜುನಾಥ(9), ವೈಶಾಲಿ (7) ಎಂದು ಗುರುತಿಸಲಾಗಿದೆ. ಗಾಯಗೊಂಡಾತನನ್ನು ರಘು(23) ಎಂದು ಗುರುತಿಸಲಾಗಿದೆ.
ಮಕ್ಕಳು ಪಾಲಕರೊಂದಿಗೆ ಹೊಲಕ್ಕೆ ಹೋಗಿ, ದನ ಮೇಯಿಸುತ್ತಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಬಂಡೆ ಕಲ್ಲಿನ ಬುಡದಲ್ಲಿ ಆಸರೆಗಾಗಿ ಕುಳಿತಿದ್ದರು. ಆ ವೇಳೆ ಬಂಡೆಕಲ್ಲು ಉರುಳಿದ್ದು, ಮಕ್ಕಳು ಸಾವನ್ನಪ್ಪಿದ್ದಾರೆ.
ಮಕ್ಕಳ ಚೀರಾಟ ಕೇಳಿ ಪೋಷಕರು ಬಂಡೆ ಎತ್ತಲು ಪ್ರಯತ್ನಿಸಿದರಾದರೂ ಬಂಡೆಯಡಿ ಸಿಲುಕಿದ್ದ ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಓರ್ವ ಬಾಲಕನ ಕಾಲಿನ ಮೇಲೆ ಬಂಡೆ ಉರುಳಿದ್ದು, ಆತನ ಕಾಲು ಮುರಿದಿದೆ. ಗಾಯಗೊಂಡಿದ್ದ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಇದನ್ನು ಓದಿದ್ದೀರಾ? ಬೆಂಗಳೂರು | ವಿಪರೀತ ಮಳೆ: ಅ.16ರಂದು ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಇಬ್ಬರು ಮಕ್ಕಳು ಮೂರನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
