ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಲಕರ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಅನೈರ್ಮಲ್ಯದಿಂದ ಕೂಡಿದ್ದು, ಉತ್ತಮ ಊಟ ನೀಡದೆ ಬೇಕಾಬಿಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
“ಗ್ರಾಮೀಣ ಭಾಗದ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲೆಂದು ವಸತಿ ನಿಲಯಗಳಿಗೆ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬ ಗಾದೆ ಮಾತು ನೆನಪಾಗುತ್ತದೆ” ಎಂದು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಗಳು ಹೇಳುತ್ತಾರೆ.
“ಉನ್ನತ ದರ್ಜೆಯ ವಿದ್ಯಾಭ್ಯಾಸಕ್ಕಾಗಿ ಮನೆ-ಮಠ ಬಿಟ್ಟು ನಗರಕ್ಕೆ ಬಂದು ವಸತಿ ನಿಲಯದಲ್ಲಿ ವಾಸ್ತವ್ಯವಿರುತ್ತೇವೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ನಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತೆಂದು ಭಯವಾಗುತ್ತದೆ” ಎಂದು ಹೆಸರೇಳಲಿಚ್ಛಿಸದ ವಿದ್ಯಾರ್ಥಿ ಕಳವಳ ವ್ಯಕ್ತಪಡಿಸಿದರು.

“ವಸತಿಯ ನಿಲಯದ ಮೂಲಸೌಕರ್ಯ, ಊಟ, ಸ್ವಚ್ಚತೆ ಬಗ್ಗೆ ನಿತ್ಯವೂ ವಸತಿ ಸಿಬ್ಬಂದಿಗಳ ಜತೆಗೆ ವಾದ ವಿವಾದಗಳು ಸಂಭವಿಸುತ್ತಿರುತ್ತವೆ. ಶಿಕ್ಷಣಕ್ಕೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಕಳಪೆ ಊಟ ಸೇವಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಹೋರಾಟಗಾರ ಜಾವೀದ್ ಖಾನ್ ವಸತಿ ನಿಲಯಕ್ಕೆ ಭೇಟಿ ನೀಡಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮಕ್ಕಳಿಗೆ ನೀಡುವ ಊಟವನ್ನು ವಸತಿಯ ಸಿಬ್ಬಂದಿ ಹಾಗೂ ಅಧಿಕಾರಿಗಳೇ ಸೇವಿಸಲಿ. ಕಳಪೆ ಊಟ ನೀಡಿ, ಉಳಿದ ಪದಾರ್ಥಗಳು ಹಾಗೂ ಕಾಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಗರ್ ಹುಕುಂ ಭೂಮಂಜೂರಾತಿಗೆ ತೊಡಕಾಗಿರುವ ಕಾನೂನು ತಿದ್ದುಪಡಿ ಮಾಡಿ: ಭೂಮಿ ವಂಚಿತರ ಆಗ್ರಹ
“ಕಳಪೆ ಊಟವನ್ನು ಸೇವಿಸಲಾಗದೆ ಮಕ್ಕಳು ಊಟವನ್ನು ಹಾಗೆ ಬಿಡುತ್ತಾರೆ. ಈ ರೀತಿ ಉಳಿದ ಆಹಾರವನ್ನು ನಿತ್ಯವೂ ಚೀಲಗಟ್ಟಲೆ ಆಹಾರವನ್ನು ಜಾನುವಾರು ಸಾಕುವವರಿಗೆ ಚೀಲಕ್ಕೆ ಇಂತಿಷ್ಟರಂತೆ ಮಾರಾಟ ಮಾಡುತ್ತಾರೆ. ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಜತೆಗೆ ಸಂವಾದ ಮಾಡಲಿ ಎಲ್ಲ ಸಮಸ್ಯೆಗಳು ಹೊರಬರುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ವಸತಿ ನಿಲಯದಲ್ಲಿ ಶೌಚಾಲಯವಿದ್ದರೂ ಮಕ್ಕಳು ಬಯಲು ಶೌಚಾಲಯಕ್ಕೆ ತೆರಳುತ್ತಿದ್ದಾರೆ. ನಿಲಯದ ಮಕ್ಕಳು ಯಾರಿಗೂ ಹೇಳದ ಪರಿಸ್ಥಿತಿಯಲ್ಲಿದ್ದಾರೆ. ಕಳಪೆ ಊಟ ಸೇವಿಸಿ ಶಾಲೆ ಕಾಲೇಜಿಗೆ ತೆರಳುತ್ತಿದ್ದಾರೆ. ಇದನ್ನು ಆದಷ್ಟು ಮೇಲಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಂಡು ಉತ್ತಮ ಊಟ, ಮೂಲ ಸೌಕರ್ಯ ಒದಗಿಸಬೇಕು” ಎಂದರು.
