ಪ್ರತಿಯೊಬ್ಬ ನಾಗರಿಕರು ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಂವಿಧಾನ ಯುವಯಾನದ ಮುಖಂಡ ಸರೋವರ ಬೆಂಕಿಕೆರೆ ಹೇಳಿದರು.
ʼದೇಶಪ್ರೇಮಿ ಯುವಾಂದೋಲನʼ ಸಂಘಟನೆಯಿಂದ ರಾಜ್ಯಾದ್ಯಂತ ಏಪ್ರಿಲ್ 14 ರಿಂದ 26ರವೆಗೆ ಹಮ್ಮಿಕೊಂಡಿರುವ ʼಸಂವಿಧಾನ ಯುವಯಾನʼ ಬೈಕ್ ಜಾಥಾ ಗುರುವಾರ ರಾಯಚೂರು ನಗರಕ್ಕೆ ತಲುಪಿತು. ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಂವಿಧಾನವು ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ-ಮನೆಗೆ ತಲುಪಿಸುವ ಪ್ರಯತ್ನವನ್ನು ಸಂವಿಧಾನಯಾನ ಜಾಗೃತಿ ಜಾಥಾ ಮೂಲಕ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ ಎಂದರು.
ಜಾಥಾವು ಬುಧವಾರ ಸಂಜೆ ಯಾದಗಿರಿ ಜಿಲ್ಲೆ ಶಹಾಪೂರ ತಾಲ್ಲೂಕು ಮೂಲಕ ಬೈಕ್ ಜಾಥಾ ದೇವದುರ್ಗ ಪಟ್ಟಣಕ್ಕೆ ಆಗಮಿಸಿ ರಾಯಚೂರು , ಮಾನ್ವಿ , ಪೋತ್ನಾಳ, ಸಿಂಧನೂರು ಹಾಗೂ ತುರುವಿಹಾಳ ಮೂಲಕ ರಾಯಚೂರು ಜಿಲ್ಲೆಗೆ ತಲುಪಿದೆ.
ಸಂವಿಧಾನಯಾನ ಜಾಥಾಕ್ಕೆ ಅಭೂತಪೂರ್ವ ಸ್ವಾಗತ ದೊರೆತ್ತಿದ್ದು, ಸ್ಥಳೀಯ ಹೋರಾಟಗಾರರು, ಯುವಕರು ಹಾಗೂ ಸಂವಿಧಾನ ಹಿತೈಷಿಗಳು ಜಿಲ್ಲೆಯ ಪ್ರತಿಯೊಂದು ಸ್ಥಳಗಳಲ್ಲಿ ನಮ್ಮನ್ನು ಬರಮಾಡಿಕೊಂಡರು. ರಾತ್ರಿ 7 ಗಂಟೆ ಸುಮಾರು ತುರುವಿಹಾಳ ಪಟ್ಟಣಕ್ಕೆ ಆಗಮಿಸಿದಾಗ ನೂರಾರು ಯುವಕರು ಬೈಕ್ ಗಳನ್ನು ಸಿದ್ಧತೆ ಮೂಲಕ ಸಿದ್ದರಾಗಿ ‘ಜೈ ಭೀಮ್, ಜೈ ಸಂವಿಧಾನ’ ಘೋಷಣೆಗಳು ಮೊಳಗಿದವು.

ಸಂವಿಧಾನ ಯುವಯಾನ ತಂಡಕ್ಕೆ ದೇವದುರ್ಗ ಶಾಸಕಿ ಪುತ್ರಿ ಗೌರಿ ಕರೆಮ್ಮ ಅವರು ಸಂವಿಧಾನ ಪೀಠಿಕೆ ನೀಡುವ ಮೂಲಕ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಇಬ್ಬರ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ರಾಯಚೂರು ನಗರದಿಂದ ಚುರುಕು ಬಿಸಿಲಿನಲ್ಲಿ ಮಾನ್ವಿ ಕಡೆಗೆ ಜಾಥಾ ಮುಂದುವರೆಯಿತು. ಬೈಕ್‌ಗಳಿಗೆ ನೀಲಿ ಧ್ವಜ ಹಾಗೂ ತ್ರಿವರ್ಣ ಧ್ವಜಗಳನ್ನು ಕಟ್ಟಿಕೊಂಡು ಹೊರಡುವ ಮಾರ್ಗ ಮಧ್ಯೆ ವಾಹನ ಸವಾರರು ಜಾಥಾ ತಂಡದವರಿಗೆ ತಂಪು ಪಾನೀಯ ಕುಡಿಸಿದರು. ಯುವಯಾನಕ್ಕೆ ಅಪಾರ ಸಂಖ್ಯೆಯ ಜನರು ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದಾರೆ.