ನೇಹಾ ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವಿದ್ಯಾರ್ಥಿನಿ ನೇಹಾಳನ್ನು ಹತ್ಯೆ ಮಾಡಿದನ್ನು ಖಂಡಿಸಿ ಆಕ್ರೋಶ ಹೊರಹಾಕಿದರು.
ನೇಹಾ ಹಿರೇಮಠರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆಗೈದ ಆರೋಪಿ ಫಯಾಜ್‌ನ ಕ್ರೂರತೆಗೆ ಪ್ರಜ್ಞಾವಂತ ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ. ದುಷ್ಕರ್ಮಿಯು ಕೊಲೆ ಮಾಡಿದ ಭೀಕರ ದೃಶ್ಯವನ್ನು ನೋಡಿದ ಮೇಲೆ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕಾಗಿ ಕಾಲೇಜಿಗೆ ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಎಸಗಿದ್ದು, ಫಯಾಜ್ ಹಾಗೂ ಅವನ ಸಹಚರರಿಗೆ ಮರಣ ದಂಡನೆಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಶರಣ ಬೂಪಾಲ ನಾಡಗೌಡ, ಅಶೋಕ ಪಾಟೀಲ್ ಅತ್ತನೂರು, ಚನ್ನಬಸವ, ಸೂಗಪ್ಪ, ವಿರೂಪಾಕ್ಷಿಗೌಡ, ರುದ್ರಯ್ಯ, ಮಲ್ಲಿಕಾರ್ಜುನ ಸ್ವಾಮಿ, ಮಲ್ಲಯ್ಯ, ಎಸ್.ಬಿ. ಪಾಟೀಲ್, ಶೇಖರ್, ಸಿದ್ದನಗೌಡ, ವೀರಯ್ಯಸ್ವಾಮಿ, ಶರಣಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.
