ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ರಾಯಚೂರು ಜಿಲ್ಲೆಯ ಕೆಲ ತಾಲೂಕುಗಳನ್ನು ಮಾತ್ರ ಬರಗಾಲ ಪ್ರದೇಶಗಳೆಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಸಂಪೂರ್ಣವಾಗಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದು, ಎಲ್ಲಾ ಬೆಳೆಗಳ ಸರ್ವೆ ಮಾಡುವುದು, ರೈತರ ಸಾಲಮನ್ನಾ ಸೇರಿದಂತೆ ರೈತರ ಇತರೆ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಕ್ಟೋಬರ್ 4ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ನಾಯಕ ತಿಳಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಇರುವ ಪರಿಣಾಮ, ರೈತರು ಬೆಳೆದ ಬೆಳೆಗಳು ನಾಶವಾಗಿದ್ದು, ನಷ್ಟ ಅನುಭವಿಸಿದ್ದಾರೆ. ಸರ್ಕಾರ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿದೆ. ಕೆಲ ತಾಲೂಕುಗಳನ್ನು ಪರಿಗಣಿಸಿದ್ದಾರೆ. ಇನ್ನೂ ಕೆಲ ತಾಲೂಕುಗಳನ್ನು ಬರ ಪ್ರದೇಶಗಳೆಂದು ಪರಿಗಣಿಸಬೇಕಾಗಿದೆ. ಬರಗಾಲಕ್ಕೆ ಕೇವಲ ಹತ್ತಿ ಮತ್ತು ತೊಗರಿ ಬೆಳೆ ಪರಿಗಣಿಸುತ್ತಿದ್ದು, ಭತ್ತ ಬೆಳೆಯು ನಾಶವಾಗಿದ್ದರಿಂದ ಭತ್ತವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
“ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದು, ಸಾಲ ಮರು ಪಾವತಿ ಮಾಡಲು ಕಷ್ಟರವಾಗಿದೆ. ಹಾಗಾಗಿ ರೈತರು ಬ್ಯಾಂಕ್‌ನಲ್ಲಿ ಪಡೆದ ಸಾಲ ಮರುಪಾವತಿಯನ್ನು ಸರ್ಕಾರ ಮುಂದೂಡಬೇಕಾಗಿದೆ. ಟ್ರಾಕ್ಟರ್ ಸಾಲ ಕಂತು ಬಾಕಿ ಇದ್ದು, ಇದನ್ನೂ ಕೂಡ ಮುಂದೂಡಬೇಕು. ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡದಿಂದ ಶೀಘ್ರವೇ ಪರಿಶೀಲನೆ ಮಾಡಿ ರೈತರಿಗೆ ನೆರವಾಗಬೇಕು” ಎಂದು ಆಗ್ರಹಿಸಿದರು.
“ಜಿಲ್ಲೆಯ ಎನ್‌ಆರ್‌ಬಿಸಿ ಬಲದಂಡೆ ಟಿಎಲ್‌ಬಿಸಿ ಎಡದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಶಾಶ್ವತವಾಗಿ ಪರಿಹಾರ ಕಂಡು ಕೊಳ್ಳಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಂಧನೂರು ತಾಲೂಕನ್ನು ಬರಗಾಲವೆಂದು ಘೋಷಿಸುವಂತೆ ರೈತರ ಆಗ್ರಹ
ಹಾಸನ ಜಿಲ್ಲೆಯ ಅರಸಿಕೆರೆಯಿಂದ ನಾಳೆ ಬೆಂಗಳೂರುವರೆಗೆ ಪಾದಯಾತ್ರೆ ನಡೆಯಲಿದೆ. ಜಿಲ್ಲೆಯಿಂದ ಸುಮಾರು 1,000 ಅಧಿಕ ಮಂದಿ ರೈತರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜಾಸಾಬ್, ಹುಲಿಗೆಯ್ಯ, ವೀರೇಶ ನಾಯಕ ಸೇರಿದಂತೆ ಇತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ ರಾಯಚೂರು