ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯಕ್ಕೆ ಸಿಲುಕಿದ್ದು, ಏಕವ್ಯಕ್ತಿ ಸರ್ವಾಧಿಕಾರಿ ಧೋರಣೆ ಅಂತ್ಯಗೊಳಿಸಲು ಜನರು ಮುಂದಾಗಬೇಕೆಂದು ಸಮಾಜ ಪರಿವರ್ತನಾ ಸಂಘಟನೆ ನಾಯಕ ಎಸ್ ಆರ್ ಹೀರೆಮಠ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿರು. “ಬಿಜೆಪಿ, ಆರ್‌ಎಸ್‌ಎಸ್ ಪ್ರೇರಿತ ಸರ್ಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವಾಧಿಕಾರ ಆಡಳಿತಕ್ಕೆ ಸಿಲುಕಿದಂತಾಗಿದೆ. ಆದರೆ ಸುಪ್ರಿಂ ಕೋರ್ಟ್ ಇತ್ತೀಚಿಗೆ ನೀಡಿದ ಎರಡು ತೀರ್ಪುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಸಹಕಾರಿಯಾಗಿವೆ. ಚಂಡಿಗಢದ ಮೇಯರ್ ಹುದ್ದೆಯನ್ನು ದೌರ್ಜನ್ಯ, ಅಕ್ರಮದಿಂದ ಕಸಿದುಕೊಂಡಿರುವ ಪ್ರಕರಣ ವಿಚಾರಣೆ ನಡೆಸಿ ಸುಪ್ರಿಂ ಕೋರ್ಟ್ ಮರು ಏಣಿಕೆ ನಡೆಸಿ ಆಯ್ಕೆ ಮಾಡಿದೆ. ಅದೇ ರೀತಿ ಬಿಜೆಪಿ ಸರ್ಕಾರ ಚುನಾವಣಾ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುವದನ್ನು ತಡೆಯುವ ಮೂಲಕ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ” ಎಂದು ಹೇಳಿದರು.
“1977ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಸ್ಥಿತಿ ಹೇರಿದ್ದರಿಂದ ಜನರು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದಿದ್ದರು. ಮುಂಬುರವ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿ ಸರ್ವಾಧಿಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕಿದೆ” ಎಂದರು.
“ಪ್ರದಾನ ಮಂತ್ರಿಯವರೇ ನಾಮ ನಿರ್ದೆಶನ ಮಾಡುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರೈತರಿಗೆ ಬೆಂಬಲ ಬೆಲೆ ಕಾಯ್ದೆ ಮಾಡಲು ಮುಂದಾಗುತ್ತಿಲ್ಲ. ಸುರ್ಧೀಘ ಹೋರಾಟ ಆಂದೋಲನ ಮಾದರಿಯಲ್ಲಿ ಪ್ರಾರಂಭವಾಗಿದ್ದು, ರೈತರನ್ನು ಹತ್ತಿಕ್ಕಲು ಅಶ್ರುವಾಯು, ಲಾಠಿಚಾರ್ಜ್ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದರು.
“ಪರ್ಯಾಯ ರಾಜಕಾರಣದ ಅವಶ್ಯಕತೆಯಿದೆ. ಆದರೆ ಪ್ರತಿಪಕ್ಷಗಳು ಒಂದಾಗಿ ಚುನಾವಣೆ ಎದುರಿಸುವ ಮೂಲಕ ಜನರ ನಿರೀಕ್ಷೆ ಆಡಳಿತ ನೀಡಬೇಕಿದೆ. ಪ್ರತಿ ವ್ಯಕ್ತಿಯೂ ತನ್ನಿಂದಲೇ ಬದಲಾವಣೆ ಕಾಣಬೇಕಿದೆ” ಎಂದರು.
ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ, “ವಾಟ್ಸಪ್ ವಿಶ್ವವಿದ್ಯಾಲಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಪರವಾಗಿ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ಸಾಲ ತೀರಿಸಲು ಅಭಿವೃದ್ದಿ ಹಣ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇದ್ದರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ 155 ಸಾವಿರ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಾಗತಿಕ ಮಟ್ಟದ ಆರ್ಥಿಕತೆ ಮಾಡುವುದಾಗಿ ಹೇಳುವಾಗ ಇಷ್ಟೊಂದು ಸಾಲ ಮಾಡಿರುವುದು ನರೇಂದ್ರ ಮೋದಿಯವರ ಸಾಧನೆ” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಈ ಸಂದರ್ಭದಲ್ಲಿ ಜನಾಂದೋಲನ ಕರ್ನಾಟಕ ಗೌರವಾಧ್ಯಕ್ಷ ಜಾನ್‌ವೆಸ್ಲಿ, ಖಾಜಾ ಅಸ್ಲಂ ಪಾಷಾ, ಮಾರೆಪ್ಪ ಹರವಿ, ಆಂಜಿನೇಯ ಕುರುಬದೊಡ್ಡಿ, ಪರಪ್ಪ ನಾಗೋಲಿ, ಈರಣ್ಣ ಭಂಡಾರಿ ಇದ್ದರು.
ವರದಿ : ಹಫೀಜುಲ್ಲ