ಸಿಂಧನೂರು ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕೂರಲು ಜಾಗವಿಲ್ಲದೆ ಪರದಾಡುವಂತಾಗಿದೆ.
“ಕೊಳಚೆ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಹಾವಳಿಯೂ ವಿಪರೀತವಾಗಿದೆ. ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸಬೇಕು” ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣದ ಅಂಗಡಿ ಮಾಲೀಕರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಸ್ ನಿಲ್ದಾಣದಲ್ಲಿದ್ದ ಅಂಗಡಿಗಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಈ ದುರ್ವಾಸನೆಯಲ್ಲಿಯೇ ಕೂರುವಂತಾಗಿದೆ. ಅಂಗಡಿ ಬಂದ್ ಮಾಡಿದರೆ ವ್ಯಾಪಾರ ವಹಿವಾಟಿಗೆ ಪೆಟ್ಟು ಬೀಳುತ್ತದೆ. ಹೀಗಾಗಿ ಅನಿವಾರ್ಯವಾಗಿ ಈ ದುರ್ವಾಸನೆಯಲ್ಲಿಯೇ ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಪ್ರಯಾಣಿಕರು ಈ ಕೊಳಚೆ ನೀರಿನಲ್ಲಿಯೇ ನಡೆದುಕೊಂಡು ಹೋಗಿ ಬಸ್ ಹತ್ತುವುದು ಮತ್ತು ಇಳಿಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಸ್ವಲ್ಪ ಮೈ ಮರೆತರೆ ಸಾಕು ಕೊಳಚೆ ನೀರಿನೊಳಗೆ ಬೀಳುವುದರಲ್ಲಿ ಅಚ್ಚರಿಯೇ ಇಲ್ಲ” ಎಂದು ಹೇಳಿದರು.
ಸ್ಥಳೀಯ ನಿವಾಸಿ, ಹೋರಾಟಗಾರ ಬಸವರಾಜ್ ಬಾದರ್ಲಿ ಮಾತನಾಡಿ, “ಕಳೆದ ಮೂರ್ನಾಲ್ಕು ದಿನಗಳಿಂದ ಕೊಳಚೆ ನೀರು ತುಂಬಿಕೊಂಡಿದೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಜಾಣಕುರುಡು ಪ್ರದರ್ಶಿಸಿದ್ದಾರೆ” ಎಂದು ಆರೋಪಿಸಿದರು.
“ಪ್ರಯಾಣಿಕರು ಹಾಗೂ ವ್ಯಾಪಾರಿಗಳ ನೋವು ಕೇಳುವವರೇ ಇಲ್ಲದಂತಾಗಿದೆ. ಹಲವು ಬಾರಿ ಬಸ್ ನಿಲ್ದಾಣದ ಬಗ್ಗೆ ಮನವಿ ನೀಡಿ, ಹೋರಾಟ ಮಾಡಿದರೂ ಕೂಡಾ ಯಾವುದೇ ರೀತಿಯ ಬದಲಾವಣೆ ಕ್ರಮ ಕೈಗೊಳ್ಳುತ್ತಿಲ್ಲ. ಯಥಾಸ್ಥಿತಿ ಬಸ್ ನಿಲ್ದಾಣ ಹದಗೆಡುತ್ತಿದೆ. ಸಿಂಧನೂರು ಬಸ್ ನಿಲ್ದಾಣದಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬರದೇ ರಸ್ತೆಯಲ್ಲೇ ನಿಂತು ಬಸ್ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಗೆ ಆಗ್ರಹ
“ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಬೇಕು. ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದರೆ ನಗರಸಭೆ ಇಲಾಖೆಯೇ ನೇರ ಕಾರಣವಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್