ರಾಯಚೂರಿನ ಲಿಂಗಸುಗೂರು ಪಟ್ಟಣದ ಹೊರವಲಯದ ಹುಲಿಗುಡ್ಡ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯ ವರ್ಷಗಳೇ ಕಳೆದರೂ ಉದ್ಘಾಟನೆಯಿಲ್ಲದೆ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಈ ಸುಸಜ್ಜಿತ ಕಟ್ಟಡ ಬಳಕೆಯಿಲ್ಲದ ಕಾರಣ ಕುಡುಕರ ತಾಣವಾಗಿ, ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿ ಮಾರ್ಪಟ್ಟಿದೆ.
ಬಳಕೆಗೂ ಇಲ್ಲ, ಇತ್ತ ನಿರ್ವಹಣೆಯೂ ಇಲ್ಲದೆ ಕಟ್ಟಡದ ಸುತ್ತ ಮುತ್ತ ಜಾಲಿ ಗಿಡಗಳು ಬೆಳೆದು ಹೆಮ್ಮರವಾಗಿವೆ. ವಿದ್ಯುತ್ ಸಂಪರ್ಕ, ನೀರಿನ ಪೈಪ್‌ಲೈನ್, ಕಿಟಕಿಗಳು ಸೇರಿದಂತೆ ಮೂಲಸೌಕರ್ಯಗಳು ಹಾಳಾಗುತ್ತಿವೆ.

ಕಾಮಗಾರಿ ಮುಗಿದು ಸುಮಾರು 8 ವರ್ಷಗಳು ಕಳೆದರೂ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇದ್ದಾರೆ. ಜನಪ್ರತಿನಿಧಿಗಳು ಕೂಡ ಉದ್ಘಾಟನೆಗೆ ಮುಂದಾಗಿಲ್ಲ. ಕಾಲೇಜು ಆವರಣದಲ್ಲಿರುವ ಸುಸಜ್ಜಿತ ಕಟ್ಟಡವೊಂದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕೆಲ ಕಿಡಿಗೇಡಿಗಳ ಊಟ ಮಾಡುವ, ಎಣ್ಣೆ ಹೊಡೆದು ಬೇಕಾಬಿಟ್ಟಿ ತ್ಯಾಜ್ಯ ಎಸೆದು ಬರುವ ತಿಪ್ಪೆಗುಂಡಿಯಾಗಿದೆ ಎಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಆರೋಪಿಸುತ್ತಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 2014-15ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಂದಾಜು 46.23 ಲಕ್ಷಗಳಲ್ಲಿ ನಿರ್ಮಾಣ ಮಾಡಿತ್ತು.
ಈ ಬಗ್ಗೆ ವಿದ್ಯಾರ್ಥಿ ಘಟಕದ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಮಾತನಾಡಿ, “ನೂತನ ಕಟ್ಟಡದಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಕಟ್ಟಡದ ಕೋಣೆಗಳು ಹಾಳಾಗಿ ಹೋಗುತ್ತಿವೆ. ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸೌಲಭ್ಯಗಳೇನೋ ಇವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ಬಳಕೆಗೆ ಸಿಗುತ್ತಿಲ್ಲ. ಕಟ್ಟಡವನ್ನು ಬಾಡಿಗೆ ಪಡೆಯಲಾಗಿದೆ ಎಂದು ನೆಪ ಹೇಳುತ್ತಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇದೆ ಸಂದೇಶ ;ಹೌಹಾರಿದ ಜನ
“ಬಿಸಿಎಮ್ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಬಾಡಿಕೆ ಕಟ್ಟಡಗಳಲ್ಲಿ ನೀಡುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ನಮಗಿಷ್ಟು ನಿಮಗಿಷ್ಟು ಎಂದು ಲೂಟಿ ಹೊಡೆಯಲು ಮುಂದಾಗಿದ್ದಾರೆ. ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಹಾಸ್ಟೆಲ್ ನಡೆಸುತ್ತಿರುವುದು ದುರಂತ ಎನ್ನಬಹುದು. ಇದರಿಂದ ವಸತಿ ನಿಲಯಗಳಿಗೆ ಸರಕಾರದ ಹಣ ವ್ಯರ್ಥವಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ನೀಡುವಲ್ಲಿ ವಾರ್ಡನ್‌ಗಳು ವಿಫಲರಾಗುತ್ತಿದ್ದಾರೆ” ಎಂದು ಹೇಳಿದರು.
ವಿದ್ಯಾರ್ಥಿನಿಯೊಬ್ಬರು ಮಾತನಾಡಿ, “ವಸತಿ ನಿಲಯ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಸಕಲ ಸೌಲಭ್ಯಗಳನ್ನು ಇಲ್ಲಿ ಅಳವಡಿಸಲಾಗಿದೆ. ಗ್ರಾಮಗಳಿಂದ ನಿತ್ಯ ಕಾಲೇಜಿಗೆ ಬಂದು ಹೋಗುವುದಕ್ಕೆ ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲದೆ ಕಾಲೇಜು ಸಮಯಕ್ಕೆ ತಲುಪಲು ಆಗುತ್ತಿಲ್ಲ. ನಗರದಲ್ಲಿ ಸಂಬಂಧಿಕರ ಮನೆಯಲ್ಲಿದ್ದು ವಿದ್ಯಾಬ್ಯಾಸ ಪಡೆಯುವುದಾಗಿದೆ. ಇಂತಹ ಸುಸಜ್ಜಿತ ಕಟ್ಟಡವಿದ್ದರೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಡಿದ್ದರೂ ಕಾರ್ಯ ರೂಪಕ್ಕೆ ತಂದಿಲ್ಲ ಎಂದರೆ ಜನಪ್ರತಿನಿಧಿಗಳಿಗೆ ನಾಚಿಕೆ ಆಗಬೇಕು” ಎಂದರು.

ವಸತಿ ನಿಲಯದ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಉಪಯೋಗಕ್ಕೆ ಬಾರದಾಗಿದೆ. ಹೆಸರಿಗೆ ಮಾತ್ರ ಇದು ವಸತಿಯುಕ್ತ ಕಾಲೇಜು. ಇಲ್ಲಿ ವಸತಿಯ ವ್ಯವಸ್ಥೆ ಇಲ್ಲ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನಿಂದ ಬರುವ ನಮಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಇದರಿಂದಾಗಿ ನಮ್ಮ ಪದವಿ ಶಿಕ್ಷಣವೇ ಹಾಳಾಗುತ್ತಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಬೇಕು ಎಂದರು.
ಸರಕಾರ ಇತ್ತ ಗಮನ ಹರಿಸದೇ ಇದ್ದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದರಲ್ಲಿ ಸಂಶಯವಿಲ್ಲ. ಕೋಟ್ಯಂತರ ರೂ. ಸುರಿದು ಕಟ್ಟಿದ ಕಾಲೇಜು, ವಸತಿ ನಿಲಯದ ಕಟ್ಟಡ ಸಂಪೂರ್ಣವಾಗಿ ನಾಶವಾಗುತ್ತದೆ. ಹಾಗಾಗಿ ಸರಕಾರ ಆದಷ್ಟು ಬೇಗ ವಸತಿ ನಿಲಯ ಪ್ರಾರಂಭ ಮಾಡಿ ವಿದ್ಯಾರ್ಥಿಗಳ ಉತ್ತಮವಾದ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಹಣದಲ್ಲಿ ನಿರ್ಮಾಣವಾದ ಈ ವಸತಿ ನಿಲಯ ಬಳಕೆಗೆ ಸಿಗದ ಕಾರಣದಿಂದ ಹಾಳಾಗುತ್ತಿರುವುದು ಸಾರ್ವಜನಿಕ ಸಂಪತ್ತಿನ ಪೋಲು ಎನ್ನಲಾಗಿದೆ. ಸ್ಥಳೀಯರು ಹಾಗೂ ವಿದ್ಯಾರ್ಥಿ ಹಕ್ಕುಪಾಲಕರ ಸಂಘಟನೆಗಳು ಕೂಡಲೇ ಈ ಕಟ್ಟಡವನ್ನು ಉದ್ಘಾಟಿಸಿ ಬಳಕೆಗೆ ತರಬೇಕೆಂದು ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಮುಂದಿನ ಅಂಕಿತ ಕ್ರಮಕ್ಕೆ ನಿಖರ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಇಂದಿನ ಅಗತ್ಯ ಎಂಬ ಮಾತು ಮುನ್ನೆಲೆಯಾಗುತ್ತಿದೆ.