ಗುತ್ತಿಗೆ ಕಾರ್ಮಿಕ ಇಲಾಖೆಯಲ್ಲಿ ಎಷ್ಟು ಕಾರ್ಮಿಕರಿದ್ದಾರೆಂದು ಸರಿಯಾದ ಮಾಹಿತಿ ಇಲ್ಲದಿದ್ದರೆ ಸಭೆಗೆ ಬಿಸ್ಕೆಟ್ ತಿನ್ನಲು ಬಂದಿದ್ದೀರಾ. ಕಚೇರಿಗೆ ಬಂದರೆ ಹೋದರೆ ಅಷ್ಟೆ ಕೆಲಸವೇ? ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಚಿವ ಸಂತೋಷ್ ಲಾಡ್ ತರಾಟೆಗೆ ತೆಗೆದುಕೊಂಡರು.
ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ಕಂದಾಯ ವಿಭಾಗದ ಎಲ್ಲ ಜಿಲ್ಲೆಗಳ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೂ ಕಾಯಂಗೊಳಿಸಿಲ್ಲ. ಎಲ್ಲ ಕಾರ್ಖಾನೆಗಳಲ್ಲಿ ಎಷ್ಟು ಕಾರ್ಮಿಕರಿದ್ದಾರೆ, ಫ್ಯಾಕ್ಟರಿಗಳನ್ನು ಕ್ಯಾಟಗರಿ ವೈಸ್ ಮಾಡಿದೀರಾ” ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, “ಕಾರ್ಮಿಕರ ಕಾಯ್ದೆಗಳ ಬಗ್ಗೆ, ಕಾರ್ಮಿಕರ ಕಾಯ್ದೆಗಳನ್ನು ಉಲ್ಲಂಘಿಸಿದ ಕಾರ್ಖಾನೆಗಳ ಬಗ್ಗೆ ಸರಿಯಾದ ಮಾಹಿತಿ ಇರದಿದ್ದರೆ ಸಭೆಗೆ ಚಿಪ್ಸ್ ತಿನ್ನಲು ಬರುತ್ತೀರಾ?” ಎಂದು ಕಿಡಿಕಾರಿದರು.
ತಾಲೂಕುವಾರು ಕಾರ್ಮಿಕರ ನೋಂದಣಿ ಬಗ್ಗೆ ಮಾಹಿತಿ ಕೇಳಿದ ಸಚಿವ ಸಂತೋಷ್ ಲಾಡ್, “ಬಹುತೇಕ ಎಲ್ಲ ಅಧಿಕಾರಿಗಳು ನೀಡುವ ಮಾಹಿತಿಯಿಂದ ಅತೃಪ್ತರಾಗಿದ್ದು, ಒಂದು ತಾಲೂಕಿನಲ್ಲಿನ ಕಾರ್ಮಿಕರ ನೋಂದಣೆ ಸರಿಯಾಗಿ ಸಂಗ್ರಹಿಸದಿದ್ದರೆ ಏನು ಕೆಲಸ ಮಾಡುತ್ತೀರಿ, ನಿಮ್ಮ ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅನೇಕ ವರ್ಷಗಳಿಂದ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂಬ ನಿಯಮವಿದೆ. ಈ ಬಗ್ಗೆ ಪರಿಶೀಲಿಸಬೇಕು. ಕಾರ್ಖಾನೆಗಳಿಗೆ ಹಾಗೂ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಗುತ್ತಿಗೆ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು. ಕಾರ್ಖಾನೆಗಳನ್ನು ಎಬಿಸಿಡಿ ಕ್ಯಾಟಗರಿ ಮಾಡಬೇಕು. ಕಾರ್ಖಾನೆಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆ, ಮಹಿಳೆಯರು, ಪುರುಷರ ಸಂಖ್ಯೆ, ಎಷ್ಟು ವರ್ಷ ಅನುಭವವಿದೆ ಎಂಬುವುದರ ಬಗ್ಗೆ ಮಾಹಿತಿ ಪಡೆಯಬೇಕು.ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿದ ಕಾರ್ಖಾನೆಗಳ ಮಾಲೀಕರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, “ರಾಯಚೂರು ತಾಲೂಕು ವ್ಯಾಪ್ತಿಯ ಯರಮರಸ್‌ನಲ್ಲಿರುವ ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಪವರ್ ಮೆಕ್ ಕಂಪನಿ ನಿರ್ವಹಣೆ ಮಾಡುತ್ತಿದ್ದು, 800 ಮಂದಿ ಕಾರ್ಮಿಕರಿದ್ದಾರೆ. 1500 ಕಾರ್ಮಿಕ ಕಾರ್ಡ್ ಹಂಚಿಕೆ ಮಾಡಿದ್ದಾರೆ. ಬೋಗಸ್ ಕಾರ್ಡ್ ಹಂಚಿಕೆಯಾದ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ದೂರು ನೀಡಿದರೂ ಪರಿಶೀಲನೆ ಮಾಡಿಲ್ಲ” ಎಂದು ಸಚಿವರ ಮುಂದೆ ದೂರಿದರು.
ಸಚಿವ ಲಾಡ್ ಪ್ರತಿಕ್ರಿಯಿಸಿ, “ಯಾವುದೇ ಕಾರ್ಖಾನೆಗಳಲ್ಲಿ ಕಾರ್ಮಿಕರು, ಮಾಲೀಕರ ಮಧ್ಯೆ ವಿವಾದ ಅಥವಾ ಕಾರ್ಮಿಕರ ಸಮಸ್ಯೆಗಳಿದ್ದರೆ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಸ್ಥಳೀಯ ಶಾಸಕರು ಯಾವುದಾದರೂ ದೂರು ನೀಡಿದ್ದಲ್ಲಿ ಕೂಡಲೇ ಸ್ಪಂದಿಸಬೇಕು ಹಾಗೂ ಅವರ ವ್ಯಾಪ್ತಿಯ ಕಾರ್ಖಾನೆಗಳ ಸಮಸ್ಯೆ ಬಗೆಹರಿಸುವಾಗ ಶಾಸಕರಿಗೆ ಮಾಹಿತಿ ನೀಡಿ ಸಹಕಾರ ಪಡೆಯಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ತಡೆಯಾಜ್ಞೆ ಜಾಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಮುಂದಾದ ಅಧಿಕಾರಿಗಳು; ರೈತರ ಆಕ್ರೋಶ
ಕಾರ್ಖಾನೆಗಳಿಗೆ ವಿಸಿಟ್ ಮಾಡಿ: “ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಖಾನೆಗಳಿಗೆ ಅಗಾಗ ಭೇಟಿ ನೀಡಿ ಬಾಲಕಾರ್ಮಿಕರಿದ್ದರೆ ಕಾರ್ಖಾನೆ ಮಾಲೀಕರ ವಿರುದ್ದ ದೂರು ದಾಖಲಿಸಬೇಕು. ಕೇವಲ ಕಚೇರಿಯಲ್ಲಿ ಕಾಲ ಕಳೆಯದೇ ಫೀಲ್ಡ್ ವಿಸಿಟ್ ಮಾಡಬೇಕು. ಕಾರ್ಮಿಕರ ಇಲಾಖೆಯ ದೂರುಗಳಿಗೆ ಸಂಬಂಧಿಸಿದಂತೆ ಟೋಲ್ ಫ್ರೀ ನಂಬರ್ ತೆರೆಯಬೇಕು. ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಸಾರ್ವಜನಿಕರಿಗೆ ತಿಳಿಯುವಂತೆ ಅಗತ್ಯ ಪ್ರಚಾರ ಮಾಡಬೇಕು” ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ ಸಾಹುಕಾರ್, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್‌ತುಕಾರಾಂ ಪಾಂಡ್ವೆ ಇದ್ದರು.
