ಮಹಿಳೆಯರು ಶೌಚಾಲಯಕ್ಕೆ ಬಳಸುತ್ತಿದ್ದ ಸರ್ಕಾರಿ ಭೂಮಿ ಜಾಗವನ್ನು ಪ್ರಬಲ ವ್ಯಕ್ತಿಗಳು ಒತ್ತುವರಿ ಮಾಡಿ ಅಕ್ರಮ ಶೆಡ್ ನಿರ್ಮಿಸುತ್ತಿರುವುದನ್ನು ಖಂಡಿಸಿ ಮಹಿಳೆಯರು ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಸುಮಾರು ವರ್ಷಗಳಿಂದ ಬಯಲು ಶೌಚಾಲಯಕ್ಕೆ ಉಪಯೋಗಿಸಿಕೊಂಡು ಬಂದಿರುವ ಜೀಗರಕಲ್ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರವಿರುವ ಸರ್ಕಾರಿ ಭೂಮಿ ಸರ್ವೆ ನಂ198, ವಿಸ್ತೀರ್ಣ 9 ಎಕರೆ 13 ಗುಂಟೆ ಸದರಿ ಜಮೀನಿನಲ್ಲಿ 30 ಗುಂಟೆಯಲ್ಲಿ ಗ್ರಾಮದ ಮಹಿಳೆಯರು ಶೌಚಾಲಯಕ್ಕೆ ಉಪಯೋಗಿಸುತ್ತಿದ್ದಾರೆ. ಇದನ್ನು ಕೆಲ ಪ್ರಬಲ ವ್ಯಕ್ತಿಗಳು ಅಕ್ರಮ ಶೆಡ್ ನಿರ್ಮಿಸಿ ಅನಧಿಕೃತವಾಗಿ ಮಾರಾಟ ಮಾಡುತ್ತಾ ಮತ್ತು ಕೆಲವು ಅಂಗಡಿ ಮುಂಗಟ್ಟುಗಳಿಗೆ ಬಾಡಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸದರಿ ಜಾಗದಲ್ಲಿ ಬಯಲು ಶೌಚಾಲಯ ಮಾಡುತ್ತಿರುವ ಮಹಿಳೆಯರಿಗೆ ಬಹಳ ತೊಂದರೆಯಾಗಿದೆ. ಅಕ್ರಮವಾಗಿ ನಿರ್ಮಿಸಿರುವ ಶೆಡ್ ತೆರವಿಗೆ ಹಲವು ಬಾರಿ ಗ್ರಾಮಸ್ಥರು ಗ್ರಾಮ ಪಂಚಾಯತ ಅಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ತೆರವುಗೊಳಿಸಲು ಮುಂದಾಗಿಲ್ಲ ಎಂದು ದೂರಿದರು.
ಸರ್ಕಾರಿ ಜಾಗದಲ್ಲಿ ಸಾಮೂಹಿಕ ಶೌಚಾಲಯ ಹಾಗೂ ಸ್ತ್ರೀ ಶಕ್ತಿ ಭವನ ನಿರ್ಮಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಚಿಕಿತ್ಸೆಗೆ ದಾಖಲಾಗಿದ್ದ ಬಾಲಕ ಜಿಲ್ಲಾಸ್ಪತ್ರೆಯಿಂದ ನಾಪತ್ತೆ; ದೂರು ದಾಖಲು
ಕರ್ನಾಟಕ ಜನಶಕ್ತಿ ಮುಖಂಡ ಮಾರೆಪ್ಪ ಹರವಿ , ಭೂಮಿ ವಸತಿ ಹೋರಾಟಗಾರ ಆಂಜನೇಯ ಕುರುಬದೊಡ್ಡಿ , ಹನುಮಂತ ,ಶ್ರೀನಿವಾಸ ಕೊಪ್ಪರ , ಆಂಜನೇಯ ಗುಂಜಳ್ಳಿ, ಬಂಗಾರಿ, ಗ್ರಾಮದ ಮಹಿಳೆಯರು ಇನ್ನಿತರರು ಇದ್ದರು.

