ರಾಯಚೂರು ತಾಲೂಕು ಜಾಗೀರ ವೆಂಕಟಾಪುರ ಗ್ರಾಮದ ಗ್ರಾಮ ಪಂಚಾಯತ್ ಕಟ್ಟಡವು 2020 ರಲ್ಲಿ ಪ್ರಾರಂಭಗೊಂಡು ಸುಮಾರು ಐದು ವರ್ಷ ಕಳೆದರೂ ಪೂರ್ಣಗೊಳ್ಳದೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ.
5 ವರ್ಷಗಳ ಹಿಂದೆ ಪಂಚಾಯತ್ ರಾಜ್ ಇಲಾಖೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ಶುರು ಮಾಡಿದ ಗ್ರಾಮ ಪಂಚಾಯತಿ ಹೈಟೆಕ್ ಕಟ್ಟಡದ ಕಾಮಗಾರಿಯು ಇಲ್ಲಿಯವರೆಗೂ ಪೂರ್ಣ ಗೊಂಡಿಲ್ಲ.
ಗ್ರಾಮದ ಸಮುದಾಯ ಭವನದ ಒಂದು ಕೋಣೆಯಲ್ಲಿ ಗ್ರಾಮ ಪಂಚಾಯತ್ ಆಡಳಿತ ನಡೆಸಲಾಗುತ್ತಿದೆ. ಸರಕಾರ ಲಕ್ಷಾಂತರ ಹಣ ಖರ್ಚು ಮಾಡಿ ಅಭಿವೃದ್ಧಿಗೆ ಮುಂದಾದರೂ ಭ್ರಷ್ಟ ಅಧಿಕಾರಿಗಳಿಂದ ಅದು ಸಾಧ್ಯವಾಗುತ್ತಿಲ್ಲ. “ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎನ್ನುತ್ತಿದ್ದಾರೆ ಗ್ರಾಮಸ್ಥರು.
ಜಾಗೀರ ವೆಂಕಟಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಲ್ತಾನ್ ಪುರ, ರಂಗನಾಥ ಹಳ್ಳಿ, ಆಳವೆಂಕಟಾಪುರ, ಮುರ್ಹಾನಪುರ, ಗೋನಾಳ, ಹರಳಪ್ಪನ ಹೂಡಾ, ಫತೆಪುರ ಮತ್ತು ಜಾಗೀರ ವೆಂಕಟಾಪುರ ಗ್ರಾಮಗಳು ಸೇರುತ್ತವೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಗ್ರಾಮ ಪಂಚಾಯತಿಗೆ ಭೇಟಿ ನೀಡುತ್ತಾರೆ.

ಅವರೆಲ್ಲರೂ ಸಮುದಾಯ ಭವನದ ಸಣ್ಣ ಕೊಠಡಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಯಾರೊಬ್ಬರಿಗೂ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶವೇ ಇದ್ದಂತೆ ಕಾಣುತ್ತಿಲ್ಲ. ಆದರೆ ಬಿಡುಗಡೆಯಾದ ಲಕ್ಷಾಂತರ ಹಣ ಮಂಗಮಾಯವಾಗುತ್ತಿದೆ. ಅಧಿಕಾರಿಗಳು ಹಣವನ್ನು ಜೇಬಿಗೆ ಇಳಿಸುವ ಉಪಾಯ ಹುಡುಕುವರೇ ಹೊರತು ಸಮಸ್ಯೆಯ ಮೂಲ ಕೆದಕಲು ಮುಂದಾಗುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಗ್ರಾಮದ ರಾಧಾ ಮಾತನಾಡಿ, “ಗ್ರಾಮ ಪಂಚಾಯತ್ ಕಟ್ಟಡ ಪ್ರಾರಂಭವಾಗಿ ಸುಮಾರು 5 ವರ್ಷಗಳು ಕಳೆದಿವೆ. ಆದರೆ ಇಲ್ಲಿಯವರೆಗೂ ಕಟ್ಟಡಕ್ಕೆ ಯಾವ ಅಧಿಕಾರಿಯೂ ಕೂಡ ಬಂದು ಅದನ್ನು ವೀಕ್ಷಿಸಿಲ್ಲ. ತಮಗೆ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಕಟ್ಟಡ ಸುತ್ತಮುತ್ತ ಜಾಲಿ ಗಿಡಗಳು ಬೆಳೆದು ಅದು ಕುಡುಕರ ತಾಣವಾಗಿ ಮಾರ್ಪಟ್ಟಿದೆ” ಎಂದರು.
“ಪಂಚಾಯತ್ ಕಟ್ಟಡಕ್ಕೆ 18 ಲಕ್ಷ್ಯ ಅನುದಾನ ಬಿಡುಗಡೆಯಾಗಿದೆ. ಗ್ರಾಮದ ಸಮುದಾಯ ಭವನದಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಸುಮಾರು ಐದಾರು ವರ್ಷಗಳಿಂದ ಸಮುದಾಯ ಭವನವೇ ಗ್ರಾಮ ಪಂಚಾಯತ್ ಕಟ್ಟಡವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮ ಪಂಚಾಯತ್ ಕಟ್ಟಡವಿಲ್ಲದೇ ಸಮುದಾಯ ಭವನದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಗೊತ್ತಿದ್ದರೂ, ಗ್ರಾಮಪಂಚಾಯತ್ ಕಟ್ಟಡ ಕಾಮಗಾರಿ ಬೇಗ ಪ್ರಾರಂಭಿಸಿ ಕಾರ್ಯರೂಪಕ್ಕೆ ತರುವುದಕ್ಕೆ ಜ್ಞಾನ ಕೂಡ ಇಲ್ಲವೇ” ಎಂದು ಕಿಡಿಕಾರಿದರು.
“ಸಮುದಾಯ ಭವನದ ಒಂದು ಕೊಠಡಿ ಇರುವುದರಿಂದ ಅಲ್ಲೇ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್, ದಾಖಲೆಗಳು ಎಲ್ಲಾ ಒಂದೇ ಕೋಣೆಗೆ ಸೀಮಿತವಾಗಿವೆ. ಜನರು ಹೊರಗಡೆ ನಿಂತು ಕಾದು-ಕಾದು ತೆರಳಬೇಕು. ಯಾರು ಯಾವ ದರ್ಜೆಯ ಅಧಿಕಾರಿಯೆಂದು ಜನರಿಗೆ ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಗ್ರಾಮ ಪಂಚಾಯತ್ ಕಟ್ಟಡ ಹೆಸರ್ ಮೇಲೆ ಲೂಟಿ ಹೊಡೆಯುವ ಹುನ್ನಾರದಿಂದ ಕಟ್ಟಡ ಮೊಟಕುಗೊಂಡಿದೆ. ಮುಂದಿನ ದಿನಗಳಲ್ಲಿ ಇದೆ ಹೆಸರ ಮೇಲೆ ಮತ್ತೆ ಅನುದಾನ ಬಿಡುಗಡೆ ಮಾಡಿ ತಮ್ಮ ಜೇಬಿಗೆ ತುಂಬಿಕೊಳ್ಳುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಟ್ಟಡ ಮತ್ತೆ ಪ್ರಾರಂಭಿಸಿ ಕಾರ್ಯ ರೂಪಕ್ಕೆ ತರಬೇಕು. ಇಲ್ಲದಿದ್ದರೆ ನೂರಾರು ಸಂಖ್ಯೆಯಲ್ಲಿ ಜನ ಸೇರಿಸಿ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಮಾತನಾಡಿ, “ಗ್ರಾಮ ಪಂಚಾಯತ್ ಕಟ್ಟಡ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸುವೆ. ಕೆಲವೊಮ್ಮೆ ಸ್ಥಳೀಯ ಸಮಸ್ಯೆಗಳು ಇರುತ್ತವೆ. ಯಾವುದೇ ಅಡೆತಡೆ ಇಲ್ಲದಿದ್ದರೆ ಕಾರ್ಯರೂಪಕ್ಕೆ ತರಲಾಗುತ್ತದೆ” ಎಂದು ಭರವಸೆ ನೀಡಿದರು.
