ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯಂ ನೇಮಕಾತಿ ಪದ್ದತಿ ತೆಗೆದು ವ್ಯವಸ್ಥಿತವಾಗಿ ಗುತ್ತಿಗೆ ಪದ್ದತಿ ಜಾರಿ ಮಾಡಿ ಕೆಲಸದ ಅಭದ್ರತೆ ಮಾಡುತ್ತಿವೆ ಹಾಗೂ ಉದ್ಯೋಗ ಸೃಷ್ಟಿಮಾಡುವಲ್ಲಿ ವಿಫಲವಾಗಿವೆ ಎಂದು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಹೇಳಿದರು.
ರಾಯಚೂರು ನಗರದ ರಂಗ ಮಂದಿರದಲ್ಲಿ ರಾಯಚೂರು ಜಿಲ್ಲಾ ಸಿಪಿಎಂ 14ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಿರುವ ಉದ್ಯೋಗಗಳಿಗೆ ಭದ್ರತೆ ಕೊಡುತ್ತಿಲ್ಲ. ಆಡಳಿತ ಸರ್ಕಾರ ಕಾರ್ಮಿಕರ ಪರವಾಗಿದ್ದ ನಲವತ್ತು ಸೌಲಭ್ಯಗಳಿರುವ ಕಾನೂನುಗಳನ್ನ ತೆಗೆದು ನಾಲ್ಕು ಕಾರ್ಮಿಕ ಕಾಯ್ದೆ ಸಂಯುಕ್ತ ಮಾಡಿ ಕಾರ್ಮಿಕರನನ್ನು ಬೀದಿಪಾಲು ಮಾಡುತ್ತಿವೆ” ಎಂದು ತಿಳಿಸಿದರು.
“ವೇತನದಲ್ಲಿಯೂ ಕೂಡ ಕನಿಷ್ಠ ವೇತನ ಜಾರಿ ಮಾಡಲಾಗದೆ ಮಾಲೀಕರ ಪರವಾಗಿ ಸರ್ಕಾರಗಳು ಕೆಲಸ ಮಾಡುತ್ತಿವೆ. ದೇಶ ಕಟ್ಟುವ ರೈತ, ಕಾರ್ಮಿಕರ ವಿರೋಧಿ ನೀತಿಗಳನ್ನು ಸರ್ಕಾರ ಜಾರಿಗೆ ತಂದು ಒಕ್ಕಲೆಬ್ಬಿಸುತ್ತಿವೆ. ದೇಶದಲ್ಲಿರುವ ರೈತರ ಭೂಮಿಯನ್ನು ಕಸಿದುಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಡಲು ಮುಂದಾಗಿವೆ. ಇದರಿಂದಾಗಿ ದೇಶದಲ್ಲಿ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಈ ಸರ್ಕಾರಗಳ ನೀತಿ ವಿರುದ್ಧ ದೊಡ್ಡ ಮಟ್ಟದಲ್ಲಿ ರೈತ ಕಾರ್ಮಿಕರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಸಬೇಕಾಗಿದೆ” ಎಂದು ಸಲಹೆ ನೀಡಿದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ ಕೆ ಪ್ರಕಾಶ ಮಾತನಾಡಿ, “ದೇಶದಲ್ಲಿ ಕೇಂದ್ರ ಸರ್ಕಾರ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುತ್ತದೆ. ನಿಜವಾದ ಜನರ ಸಂಕಷ್ಟಗಳಾದ ಬಡತನ, ನಿರುದ್ಯೋಗ, ರೈತರು ಬೆಳೆದ ಬೆಳೆಗಳಿಗೆ ಬೆಂಬಲಿತ ಬೆಲೆ ಕೊಡಲಾರದೆ ಧರ್ಮದ ಅಫೀಮಿನಲ್ಲಿ ದಾರಿ ತಪ್ಪಿಸುತ್ತಿವೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ನೀತಿ ತಂದು ರಾಜ್ಯ ಸರ್ಕಾದಿಂದ ಜಾರಿ ಮಾಡಿಸಲು ಮುಂದಾಗಿವೆ. ಕೇಂದ್ರ ಸರ್ಕಾರದ ನೀತಿಯಿಂದ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ನೀತಿ ವಿರೋಧಿಸುವಲ್ಲಿ ವಿಫಲವಾಗಿದೆ. ವಕ್ಫ್ ಕೂಡ ಸುಪ್ರೀಂ ಕೊರ್ಟ್ ಆದೇಶದಂತೆ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಆದೇಶವಾಗಿದೆ. ಆದರೆ ಪ್ರಸ್ತುತ ಬಿಜೆಪಿಯವರು ವಕ್ಫ್ ಹೆಸರಿನಲ್ಲಿ ರಾಜಕೀಯ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ. ಎರಡೂ ಸರ್ಕಾರಗಳು ಉದ್ಯೋಗ, ಆರೋಗ್ಯ, ಶಿಕ್ಷಣ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ” ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ನಮ್ಮ ಶಾಲೆ ಮುಚ್ಚಕ್ಕೆ ಬಿಡಲ್ಲ: ಬ್ಯಾಲಹಳ್ಳಿ ಹೈಸ್ಕೂಲ್ ವಿದ್ಯಾರ್ಥಿಗಳ ಪೋಷಕರ ಆಕ್ರೋಶ
“ದೇಶದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಗಟ್ಟಿಳಿಸಲು ಸಿಪಿಐಎಂ 14ನೇ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಏಮ್ಸ್, ನೀರಾವರಿ ಯೋಜನೆ, ಕೈಗಾರಿಕೆಗಾಗಿ ದೊಡ್ಡ ಹೋರಾಟ ಮಾಡಲು ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಚರ್ಚೆ ಮಾಡಲಾಗುವುದು” ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಕೆಜಿ ವೀರೇಶ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್ ಪದ್ಮಾ, ನರಸಣ್ಣ ನಾಯಕ, ಶರಣಬಸವ, ಶಬ್ಬೀರ್, ಗಿರಿಯಪ್ಪ ಪೂಜಾರಿ, ದೇವಿಂದ್ರಗೌಡ, ಶೇಖಮ್ಮ ದೇಸಾಯಿ, ವರಲಕ್ಷ್ಮೀ,ಎಸ್ ಎಸ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಇನ್ನಿತರರು ಹಾಜರಿದ್ದರು.
