ವಿಜಯಪುರದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಅಮಾನವೀಯವಾಗಿದ್ದು, ಮನುಷ್ಯತ್ವ ಇದ್ದವರು ಯಾರೂ ಹೀಗೆ ಮಾಡುವುದಿಲ್ಲ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೊಷ್ ಲಾಡ್ ತಿಳಿಸಿದರು.
ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
“ನಾಗರಿಕ ಸಮಾಜದಲ್ಲಿ ಬದುಕುವವರೆಲ್ಲರೂ ನಾವು ಇಂಥ ಘಟನೆ ನೋಡಿ ಬೆಚ್ಚಿ ಬೀಳುವಂತಾಗಿದೆ. ಮಾಲೀಕರಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇರಬೇಕು. ಮನುಷ್ಯತ್ವ ಇಲ್ಲದವರೇ ಇಂತಹ ಕೃತ್ಯ ಎಸಗುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದಲ್ಲಿ ಕಾಯ್ದೆ, ಕಾನೂನುಗಳಿದ್ದರೂ ಅಪರಾಧ ಚಟುವಟಿಕೆಗಳು ಕಡಿಮೆಯಾಗುತ್ತಿಲ್ಲವೆಂದರೆ ಜನರಿಗೆ ಕಾನೂನುಗಳ ಬಗ್ಗೆ ಅರಿವಿಲ್ಲ ಎಂದರ್ಥವಲ್ಲ. ಕಾನೂನುಗಳನ್ನು ಬಿಗಿಗೊಳಿಸಿದರೆ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನುವುದು ತಪ್ಪು, ಜನರಿಗೆ ಮಾನವೀಯತೆ ಇರಬೇಕು. ಜನರ ಮನಸ್ಥಿತಿ ಬದಲಾದರೆ ಇಂತಹ ಕೃತ್ಯ ನಿಯಂತ್ರಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ಮಿಕರ ಬಗ್ಗೆ ಮಾಹಿತಿಯಿಲ್ಲದೆ ಸಭೆಗೆ ಬಿಸ್ಕೆಟ್ ತಿನ್ನಲು ಬರುತ್ತೀರಾ: ಸಂತೋಷ್ ಲಾಡ್ ತರಾಟೆ
“ಪ್ರಧಾನಿ ಮೋದಿಯವರ 11 ವರ್ಷಗಳ ಹಿಂದಿನ ಭಾಷಣ ಕೇಳಿದರೆ ಜನರಿಗೆ ನಿಜ ತಿಳಿಯುತ್ತದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಖೇಲೋ ಇಂಡಿಯಾ ಯೋಜನೆಯಗಳ ಪ್ರಗತಿ ಏನಾಗಿದೆ? ಮಾಧ್ಯಮಗಳು ಬಿಜೆಪಿ ನಾಯಕರಿಗೆ ಇದರ ಬಗ್ಗೆ ಪ್ರಶ್ನೆ ಕೇಳಬೇಕು” ಎಂದು ಹೇಳಿದರು.
ʼಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆʼ ಎಂಬ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಇದು ಅವರ ಮನಸ್ಥಿತಿ ತೋರಿಸುತ್ತದೆ, ಭಾಗವತ್ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರವಲ್ಲದೆ ದೇಶದ ಇಡೀ ನಾಗರಿಕರಿಗೆ ಅವಮಾನ ಮಾಡಿದ್ದಾರೆ” ಎಂದು ಕಿಡಿಕಾರಿದರು.
