ಪ್ರಜಾಸಾಕ್ಷಿ ದಿನಪತ್ರಿಕೆ ಸಂಪಾದಕ ರಮೇಶ ಗೋರೆಬಾಳ ಅವರು ಭಾನುವಾರ ಹೃದಯಘಾತದಿಂದ ನಿಧನರಾಗಿದ್ದು, ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ, ರಮೇಶ ಗೋರೆಬಾಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಮೌನಾಚರಿಸಿ ಸಂತಾಪ ಸೂಚಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್ ಗುರುನಾಥ ಮಾತನಾಡಿ, “ಕಳೆದ 20 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಮೇಶ ಗೋರೆಬಾಳ ಅವರ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ” ಎಂದರು.
“ಪತ್ರಿಕೆ ಏಜೆಂಟರಾಗಿ ಕೆಲಸ ಮಾಡುವುದರ ಜತೆಗೆ ಜಿಲ್ಲಾ ಮಟ್ಟದ ಪತ್ರಿಕೆಯೊಂದನ್ನು ಹುಟ್ಟುಹಾಕಿ ಮುನ್ನಡೆಸುತ್ತಿದ್ದ ರಮೇಶ ಗೋರೆಬಾಳ ಅತಿ ಚಿಕ್ಕ ವಯಸ್ಸಿನಲ್ಲಿ ನಿಧನರಾಗಿರುವುದು ದುಖಃದ ಸಂಗತಿ. ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ, “ಏಜೆಂಟರಾಗಿ ಕೆಲಸ ಮಾಡುವುದರ ಜತೆಗೆ ಜಿಲ್ಲಾ ಮಟ್ಟದ ಪತ್ರಿಕೆಯನ್ನು ಮುನ್ನಡೆಸಿದರು. ಸಂಕಷ್ಟದಲ್ಲಿ ಪತ್ರಿಕೆಯನ್ನು ಆರಂಭ ಮಾಡಿ ಯಶಸ್ಸು ಕಂಡಿದ್ದರು. ಪತ್ರಕರ್ತರು ಒತ್ತಡಗಳಿಗೆ ಒಳಗಾಗದೇ ಆರೋಗ್ಯಕ್ಕೆ ಒತ್ತು ನೀಡಬೇಕಿದೆ” ಎಂದರು.
ಪತ್ರಕರ್ತರಾದ ಸಿದ್ದು ಬಿರಾದರ್, ಲಕ್ಷ್ಮಣರಾಯ್ ಕಪಗಲ್, ಆನಂದಸ್ವಾಮಿ, ಜಯಕುಮಾರ ದೇಸಾಯಿ, ಅಂಬಣ್ಣ ಅರೋಲಿ ಸೇರಿದಂತೆ ಅನೇಕ ಪತ್ರಕರ್ತರು ಮಾತನಾಡಿ ಸಂತಾಪ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಾಜ್ಯ ಹೆದ್ದಾರಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆಗ್ರಹ
ಸಭೆಯಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಪಾಷಾ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಹಿರಿಯ ಪತ್ರಕರ್ತರಾದ ದತ್ತು ಸರ್ಕಿಲ್, ಬಸವರಾಜ ನಾಗಡದಿನ್ನಿ, ಧೀರೆಂದ್ರ ಕುಲಕರ್ಣಿ, ಸಿದ್ದಯ್ಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಭೀಮಸೇನ ಕಲ್ಲೂರು, ವಿಜಯ ಜಾಗಟಗಲ್, ಜಗನ್ನಾಥ ಪೂಜಾರಿ, ಚಂದ್ರಕಾಂತ ಮಸಾನಿ, ವೆಂಕಟೇಶ ಹೂಗಾರ, ರಾಮಕೃಷ್ಣ ದಾಸರಿ, ಭೀಮೇಶ ಪೂಜಾರಿ, ರಾಚಯ್ಯಸ್ವಾಮಿ, ನೀಲಕಂಠಸ್ವಾಮಿ, ಪ್ರಸನ್ನಕುಮಾರ ಜೈನ್, ಶ್ಯಾಮಸುಂದರ್ ಲಂಗೋಟಿ, ಭಾವಸಲಿ, ಅಬ್ದುಲ್ ಖಾದರ್, ದುರುಗೇಶ, ಎ ಎಲ್ ತಾಯಪ್ಪ, ಶಿವಕುಮಾರ, ಹನುಮಂತು ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ
