ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಯರಗೇರಾ ಹೋಬಳಿಯನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಯರಗೇರಾ ತಾಲ್ಲೂಕು ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು.
ಬೆಂಗಳೂರು ಧರಣಿಗೆ ರಾಯಚೂರಿನ ಯರಗೇರ ಗ್ರಾಮದ ಹೋರಾಟಗಾರರು ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುಮಾರು 40 ಕ್ರಷರ್‌ಗಳಲ್ಲಿ ಕನಿಷ್ಠ 400 ಕ್ಕೂ ಅಧಿಕ ಜನರು ಬೆಂಗಳೂರಿಗೆ ತೆರಳಿ ಇಂದು ಪ್ರತಿಭಟಿಸಿದರು.
ಯರಗೇರಾ ಹೋಬಳಿಯು ತಾಲ್ಲೂಕು ಕೇಂದ್ರವಾಗಲು ಅಗತ್ಯವಿರುವ ಎಲ್ಲ ಅಂಶಗಳನ್ನು ಹೊಂದಿದೆ. ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪಿತವಾಗಿದ್ದು, 326 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ 167 ರ ಬಳಿಯಲ್ಲಿರುವ ಈ ಪ್ರದೇಶದಲ್ಲಿ ಯೋಜನೆಗಳಿಗೆ ಯಾವುದೇ ತಾಂತ್ರಿಕ ಅಡಚಣೆಗಳಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಯರಗೇರಾ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದ್ದು, ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನಡುವೆಯಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ. ಒಟ್ಟು 19 ಗ್ರಾಮ ಪಂಚಾಯಿತಿಗಳ 78 ಗ್ರಾಮಗಳು ಈ ಹೋಬಳಿಗೆ ಸೇರಿವೆ. ಹೀಗಾಗಿ ತಾಲ್ಲೂಕು ಘೋಷಣೆಯಾಗುವುದು ನ್ಯಾಯಯುತ ಮತ್ತು ಅಗತ್ಯ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎರಡು ಗುಂಪುಗಳ ಮಧ್ಯೆ ಗಲಾಟೆ: ಬೈಕ್ ಬೆಂಕಿಗೀಡಾಗಿ ಭಸ್ಮ
ಧರಣಿಯಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಹ್ಮದ್ ನಿಜಾಮುದ್ದೀನ್, ಬುಡ್ಡನಗೌಡ ಪಾಟೀಲ್, ನಟಿ ಪೂಜಾ ರಮೇಶ, ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ್ ಹೂಗಾರ್, ವಿದ್ಯಾನಂದ್ ರೆಡ್ಡಿ, ತಾಯಪ್ಪ, ಮೊಮ್ಮದ್ ರಫಿ, ರಾಮರೆಡ್ಡಿ, ಬಸವರಾಜ ರೆಡ್ಡಿ, ಮಹದೇವ ನಾಯಕ್, ರಮೇಶ್, ವೆಂಕಟೇಶ್, ರವಿ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

