ಮುಸ್ಲಿಂ ಯುವಕನೊಬ್ಬ ತನ್ನ ವಿವಾಹ ಸಮಾರಂಭಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿದ ಸಂಗತಿ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಇಬ್ರಾಹಿಂ ವಲಿ ಎಂಬ ಯುವಕ ನಗರದ ಸಂಗಮ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ನಡೆದ ವಿವಾಹ ರೆಸೆಪ್ಶನ್( ವಲೀಮಾ)ದಲ್ಲಿ ವಧು ವರರಿಗೆ ಆಶೀರ್ವದಿಸಲು ಮದುವೆಗೆ ಬಂದ ಗೆಳೆಯರಿಗೆ ಹಾಗೂ ಸಂಬಂಧಿಕರಿಗೆ ಸಂವಿಧಾನ ಪೀಠಿಕೆ ವಿತರಿಸಿ ವಿನೂತನವಾಗಿ ವಿವಾಹವನ್ನು ಸಂಭ್ರಮಿಸಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿ ವಿವಾಹವೂ ಅದ್ಧೂರಿತಕ್ಕೆ ಹಾಗೂ ದುಂದುವೆಚ್ಚಕ್ಕೆ ಆಸ್ಪದ ನೀಡುವ ಮಧ್ಯೆ ಮುಸ್ಲಿಂ ಯುವಕನೊಬ್ಬ ಸರಳವಾಗಿ ವಿವಾಹ ನೆರವೇರಿಸಿಕೊಂಡು ಸಂವಿಧಾನದ ಪೀಠಿಕೆ ಹಂಚಿ ಗಮನ ಸೆಳೆದಿದ್ದಾನೆ.

ವರ ಇಬ್ರಾಹಿಂ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಸಂವಿಧಾನದ ಪೀಠಿಕೆ ಬಗ್ಗೆ ಗೊತ್ತಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಟಿವಿ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿದ್ದ. ಈತ ತಮ್ಮ ಸುತ್ತಮುತ್ತಲಿನ ಪ್ರಗತಿಪರರಿಗೆ ಹಾಗೂ ಹೋರಾಟಗಾರರಿಗೆ ಕೇಳುತ್ತಿದ್ದ ಹಾಗೂ ಯಾಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಸಂವಿಧಾನದ ಪ್ರಸ್ತಾವನೆಯಲ್ಲಿನ ವಿಷಯ ಇಷ್ಟವಾಗಿ ತನ್ನ ಗೆಳೆಯರೊಂದಿಗೆ ಚರ್ಚಿಸಿದ್ದಾನೆ.
ಅನೇಕರು ಈತನ ನಿರ್ಧಾರಕ್ಕೆ ಬೆಂಬಲ ನೀಡಿದ್ದರಿಂದ ಆಯ್ದ 120 ಜನರಿಗೆ ಪ್ರಸ್ತಾವನೆ ಹಂಚಿದ್ದಾನೆ. ಇಬ್ರಾಂಹಿನ ಈ ನಿರ್ಧಾರದಿಂದ ಸಂತಸರಾದ ಕೆಲ ಗೆಳೆಯರು ಈತನಿಗೆ ದೊಡ್ಡದಾದ ಸಂವಿಧಾನದ ಪ್ರಸ್ತಾವನೆಗೆ ಫೋಟೋ ಫ್ರೇಮ್ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ₹10 ಸಾವಿರಕ್ಕೆ ಕೈಚಾಚಿದ ಕಡಬ ಪಿಡಿಒಗೆ 3 ವರ್ಷ ಜೈಲು ಶಿಕ್ಷೆ
ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೋರಾಟಗಾರ ಅಝೀಝ್ ಜಾಗೀರದಾರ್, ರವಿಚಂದ್ರ, ಪ್ರಾಣೇಶ ಹಾಗೂ ಪೊಲೀಸ್ ಅಧಿಕಾರಿ ಗೋಳಾಳಪ್ಪ,ನಿವೃತ್ತ ಪೊಲೀಸರು ಹಾಗೂ ಲಾರಿ, ಟ್ಯಾಕ್ಸಿ ಚಾಲಕರು ಶುಭ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು.
