ಬೀದಿನಾಯಿಗಳ ದಾಳಿಯಿಂದ ಮೃತಪಟ್ಟ ಮಡ್ಡಿಪೇಟೆಯ ನಿವಾಸಿ ಮಹಾದೇವಿ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್ ವಾದಿ)ದಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರದ ಮಡ್ಡಿಪೇಟೆ ಬಡಾವವಣೆಯಲ್ಲಿ ಡಿಸೆಂಬರ್ 7ರಂದು ಮನೆಯ ಮುಂದೆ ನಿಂತಿದ್ದ ಮಹಾದೇವಿ(23)ಯವರ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಗಾಯಗೊಂಡ ಯುವತಿ ಕೋಮಾ ಸ್ಥಿತಿಗೆ ತೆರಳಿ ಬಳಿಕ ಸಾವನ್ನಪ್ಪಿದ್ದರು.
“ನಾಯಿಗಳ ದಾಳಿಯಿಂದ ಮಹಾದೇವಿ ಕೆಳಗೆ ಬಿದ್ದಾಗ ಅವರ ತಲೆಗೆ ಬಲವಾಗಿ ಪೆಟ್ಟುಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಎಂ ಕೆ ಭಂಡಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮರಳಿ ಮನೆಗೆ ಕರೆದುಕೊಂಡು ಬಂದಿದ್ದರು. ನಾಲ್ಕು ದಿನಗಳ ನಂತರ ಕೊನೆಯುಸಿರು ಎಳೆದ್ದಾರೆ. ಮಹಾದೇವಿ ಕುಟುಂಬದವರಿಗೆ ರಾಜ್ಯ ಸರ್ಕಾರ ಕೂಡಲೇ ₹30 ಲಕ್ಷ ಪರಿಹಾರ ಕೊಡಬೇಕು” ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
“ನಗರದ ಸ್ಲಂ ಪ್ರದೇಶಗಳಾದ ಮಡ್ಡಿಪೇಟೆ, ಎಲ್‌ಬಿಎಸ್ ನಗರ, ಸಿಯಾತಲಾಬ, ಹರಿಜನವಾಡ, ಜಲಾಲನಗರ, ಮೈಲಾರನಗರ, ಕಾಳಿದಾಸನಗರ, ಜಹೀರಾಬಾದ್ ಸ್ಟೇಷನ್ ಏರಿಯಾ, ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತೆಲಂಗಾಣಕ್ಕೆ ಭತ್ತ ಸಾಗಾಟ ನಿರ್ಬಂಧ; ರಾಜ್ಯ ರೈತ ಸಂಘ ಖಂಡನೆ
“ಬಡಾವಣೆಗಳಲ್ಲಿ ಆಟವಾಡುವ ಮಕ್ಕಳು, ರಸ್ತೆಗಳಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ ಬೀದಿನಾಯಿಗಳು ಎರಗುತ್ತವೆ. ಬೀದಿನಾಯಿಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ನಗರಸಭೆ ಹಾಗೂ ಜಿಲ್ಲಾಡಳಿತ ಬೀದಿನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಎಚ್ ಪದ್ಮಾ ಕರಿಯಪ್ಪ ಅಚ್ಚೋಳಿ, ಇಂದಿರಾ, ನಾಗರಾಜ, ಹನ್ಮಂತು, ಶಿವಣ್ಣ, ಶ್ರೀನಿವಾಸ, ರಾಜು, ಲಕ್ಷ್ಮಣ, ರೇಣುಕಮ್ಮ, ಶರಣಮ್ಮ, ಅನಿಲ್, ಗಗನ್, ಬುಜಪ್ಪ, ಡಿ ಎಸ್ ಶರಣಬಸವ, ಗೋಕಾರಮ್ಮ, ಸೇರಿದಂತೆ ಮಡ್ಡಿಪೇಟೆ ನಿವಾಸಿಗಳು ಇದ್ದರು.
