ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಶೀಘ್ರವೇ ಬರ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಒತ್ತಾಯಿಸಿದೆ.
ಸಿಂಧನೂರಿನಲ್ಲಿ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಸಲ್ಲಿಸಿದ ಪಕ್ಷದ ಕಾರ್ಯಕರ್ತರು, “ತುಂಗಭದ್ರಾ ವರದಾನದಿಂದ ಸಿಂಧನೂರು ತಾಲೂಕು ಸಮಗ್ರ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತುಂಗಭದ್ರಾ ಒಡಲು ಬರಿದಾಗಿದೆ. ತಾಲೂಕಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ, ತಾಲೂಕಿನ ಕೆಲ ಹೋಬಳಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ” ಎಂದು ತಿಳಿಸಿದ್ದಾರೆ.
“ಈ ವರ್ಷ ಮುಂಗಾರು ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಜೋಳ, ಹತ್ತಿ, ಕಡಲೆ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿ ಹೋಗಿವೆ. ಸಾಗುವಳಿಗಾಗಿ ಖರ್ಚು ಮಾಡಿದ ಹಣವೂ ರೈತರ ಕೈಸೇರಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಲುವೆಯ ವಿಷಯದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಸಮರ್ಪಕವಾಗಿಲ್ಲ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಗೇಜ್ ಸರಿಯಾಗಿಲ್ಲ. ಕಾಲುವೆ ಮಧ್ಯ ಮತ್ತು ಕೊನೆಯ ಭಾಗದ ಜಮೀನುಗಳಿಗೆ ಕಳೆದ ದಶಕದಿಂದಲೂ ಕಾಲುವೆ ನೀರು ಹೋಗುತ್ತಿಲ್ಲ. ಈ ಕುರಿತಂತೆ ಆ ಭಾಗದ ರೈತರು ಹಲವಾರು ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಕಿಡಿಕಾರಿದ್ದಾರೆ.
ಈ ವೇಳೆ, ಕರ್ನಾಟಕ ರಾಷ್ಟ್ರ ಪಕ್ಷ ಯುವ ಘಟಕ ಮುಖಂಡ ನಿರುಪಾದಿ ಗೋಮಾರ್ಸಿ ಹಾಗೂ ಹಲವರು ಇದ್ದರು.