ಕೃಷಿ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ದೂರ ಮಾಡಲು ಕೃಷಿ ಎಂಜಿನಿಯರ್ ವಿದ್ಯಾರ್ಥಿಗಳು, ವಿಜ್ಞಾನಿಗಳು ಹೆಚ್ಚು ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರ ಪ್ರತ್ಯೇಕ ಕೃಷಿ ಎಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪನೆಗೆ ಅಧಿಕಾರಿಗಳಿಂದ ವರದಿ ಪಡೆದು ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಕೃಷಿ ಸಚಿವ ಚೆಲುರಾಯಸ್ವಾಮಿ ಹೇಳಿದರು.
ರಾಯಚೂರಿನ ಕೃಷಿ ವಿಜ್ಞಾನ ವಿದ್ಯಾಲಯದಲ್ಲಿ ಆಯೋಜಿಸಿದ್ದ 57ನೇ ಕೃಷಿ ಎಂಜಿನಿಯರಿಂಗ್ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ಕಳೆದ 15 ವರ್ಷಗಳಿಂದ ವಾತಾವರಣದ ಬದಲಾವಣೆ, ಮಣ್ಣಿನ ಫಲವತ್ತತೆ ಕುಸಿತ, ಇಳುವರಿಯಲ್ಲಿ ಇಳಿಕೆ ಸೇರಿದಂತೆ ಬಹುತೇಕ ಸಮಸ್ಯೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯಗಳು ರೈತರ ನೆರವಿಗೆ ಧಾವಿಸಬೇಕಾದ ಅವಶ್ಯಕತೆಯಿದೆ. ರೈತರಿಗೆ ಕೇವಲ ಪ್ರೋತ್ಸಾಹಧನ ನೀಡಿದರೆ ಸಾಲದು. ಅವರೇ ಉದ್ಯೋಗ ಸೃಷ್ಟಿಸುವಂತಹ ಕಾರ್ಯ ನಡೆಸಬೇಕಿದೆ” ಎಂದರು.
“ಜನರಿಗೆ ಪೌಷ್ಟಿಕ ಆಹಾರ ಒದಗಿಸುವ ಜೊತೆಗೆ ಕೃಷಿಯನ್ನು ಉತ್ತೇಜಿಸುವ ಕೆಲಸಕ್ಕೆ ಕೃಷಿ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮುಂದಾಗಬೇಕಿದೆ. ಕೇವಲ ಉದ್ಯೋಗಕ್ಕೆ ಅಂಟಿಕೊಳ್ಳದೆ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಕಡಿಮೆ ನೀರು ಬಳಸಿ ಆಹಾರ ಬೆಳೆಯುವ ತಂತ್ರಜ್ಞಾನ, ಕಡಿಮೆ ಅವಧಿಯಲ್ಲಿ ಬೆಳೆಯುವ ಬೆಳೆಗಳ ಕುರಿತು ರೈತರಿಗೆ ಮಾಹಿತಿ ತಲುಪಿಸಬೇಕು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮುಂದಾಗಬೇಕು” ಎಂದು ಸಲಹೆ ನೀಡಿದರು.
“ರಾಜ್ಯ ಸರ್ಕಾರ, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದೆ. ಅಲ್ಲದೇ ಸೆಕೆಂಡರಿ ಕೃಷಿ ಸಂಶೋಧನೆಗೆ 6 ಕೋಟಿ ರೂಪಾಯಿ, ಅಗ್ರಿಸೇತು ಆ್ಯಪ್‌ಗೆ ₹10 ಕೋಟಿ, ಸಿರಿಧಾನ್ಯ ಬೆಳಗಳಿಗೆ ₹13 ಕೋಟಿ ಹಾಗೂ ಕೃಷಿ ಹೊಂಡಗಳ ನಿರ್ಮಾಣಕ್ಕೆ ₹200 ಕೋಟಿಯಷ್ಟು ಅನುದಾನ ಒದಗಿಸಲಿದೆ. ವಾತಾವರಣಕ್ಕೆ ಪೂರಕವಾದ ಬೆಳೆಗಳನ್ನು ಪ್ರೋತ್ಸಾಹಿಸಲು ಎಲ್ಲರೂ ಕೈ ಜೋಡಿಸಬೇಕು. ಆ ಮೂಲಕ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವಾಗಬೇಕು” ಎಂದು ಸಮ್ಮೇಳನಕ್ಕೆ ಶುಭ ಕೋರಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ ಮಾತನಾಡಿ, “ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿದ್ದು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಾಂತ್ರಿಕ ನೆರವಿನ ಅವಶ್ಯಕತೆಯಿದೆ. ಭತ್ತ ನಾಟಿಯಂತ್ರ ಇನ್ನೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನುಳಿದಂತೆ ಯಂತ್ರೋಪಕರಣಗಳು ಪರಿಣಾಮಕಾರಿಯಾಗಿ ರೈತರಿಗೆ ನೆರವಾಗುತ್ತಿವೆ. ತಾಂತ್ರಿಕ ಅವಿಷ್ಕಾರಗಳು ಕಡಿಮೆ ಖರ್ಚಿನಲ್ಲಿ ರೈತರಿಗೆ ತಲುಪುವಂತಾಗಬೇಕು” ಎಂದರು.
ಐಎಸ್‌ಎಇ ಅಧ್ಯಕ್ಷರು ಮಾತನಾಡಿ, “ಕೃಷಿಯ ಎಲ್ಲ ವಲಯಗಳಲ್ಲಿಯೂ ತಾಂತ್ರಿಕತೆ ಬಳಕೆಗೆ ಇರುವ ಅವಕಾಶಗಳನ್ನು ಬಳಿಸಿಕೊಳ್ಳಬೇಕಿದೆ. ಹೊಸದಾಗಿ ಕೃಷಿ ಎಂಜಿನಿಯರಿಂಗ್ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗ ಅವಕಾಶಕ್ಕೆ ಸೀಮಿತವಾಗದೇ ಇತರೆ ವಲಯಗಳಲ್ಲಿಯೂ ಅವಕಾಶ ದೊರೆಯಬೇಕಿದೆ. ಕೃಷಿಯಲ್ಲಿ ತಾಂತ್ರಿಕ ಅವಶ್ಯಕತೆಯ ಹಿನ್ನಲೆಯಲ್ಲಿ ಪ್ರತ್ಯೇಕ ಕೃಷಿ ಎಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರದ ವಿರುದ್ಧ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ
ಮಾನವಿ ಶಾಸಕ ಹಂಪಯ್ಯನಾಯಕ, ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ, ಐಎಸ್‌ಎಇ ಕಾರ್ಯದರ್ಶಿ ಡಾ. ಪಿ ಕೆ ಸಾಹು, ಡಾ. ಉದಯಕುಮಾರ ನಿಡ್ಡೋಣ ಸೇರಿದಂತೆ ಕೆನಡಾ, ಅಬುದಾಬಿ, ಯುಎಸ್‌ಎಯಂತಹ ವಿವಿಧ ದೇಶ, ರಾಜ್ಯಗಳಿಂದ ಆಗಮಿಸಿದ್ದ ಕೃಷಿ ಎಂಜಿಯರ್‌ಗಳು, ವಿಜ್ಞಾನಿಗಳು ಹಾಗೂ ಪ್ರತಿನಿಧಿಗಳು ಇದ್ದರು.
ವರದಿ : ಹಫೀಜುಲ್ಲ