ರಾಯಚೂರು ಜಿಲ್ಲೆಗೆ ಅಂಟಿಕೊಂಡಿರುವ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಿತ್ತೊಗೆಯಲು ಜಲಶಕ್ತಿ ಅಭಿಯಾನ, ಅಪೌಷ್ಟಿಕತೆ ನಿವಾರಣೆ, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕತೆ, ಸಮರ್ಪಕ ಶುದ್ಧ ಕುಡಿಯುವ ನೀರಿನ ಸರಬರಾಜು, ಅಂತರ್ಜಲ ಮಟ್ಟ ಹೆಚ್ಚಳ, ವೈಜ್ಞಾನಿಕವಾಗಿ ನೀರಿನ ಸಂರಕ್ಷಣೆ ಸೇರಿದಂತೆ ಎಲ್ಲ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವ ಎನ್.ಎಸ್ ಬೋಸರಾಜು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಸುಬೋದ್ ಯಾದವ್ ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಬೋಸರಾಜ್ ಅವರು ಸಭೆ ನಡೆಸಿದ್ದಾರೆ. “ರಾಯಚೂರು ಜಿಲ್ಲೆ ಎಂದ ತಕ್ಷಣ ಅಪೌಷ್ಟಿಕತೆ ನೆನಪಿಗೆ ಬರುತ್ತದೆ. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ” ಎಂದು ತಿಳಿಸಿದರು.
“ಜಿಲ್ಲೆಯ ಸಿರವಾರ, ಮಸ್ಕಿ ತಾಲೂಕಿನಲ್ಲಿ ಅಂತರ್ಜಲ ಸಮೃದ್ಧಿಗಾಗಿ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಬೇಕು. ಸಿರವಾರ ತಾಲೂಕಿನ ಚಿಂಚರಕಿ, ಹೀರಾ, ಅತ್ತನೂರು ಶಾಶ್ವತ ನೀರಿನ ಸಮಸ್ಯೆ ಪರಿಹರಿಸಲು ಗಮನಹರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ, ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಕೃಷಿ ವಿವಿ ಕುಲಪತಿ ಹನುಮಂತಪ್ಪ, ಐಎಎಸ್ ಪ್ರೇಕ್ಷಾರ್ಥಿ ಸಾಹಿತ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.