ನಗರದ 13ನೇ ವಾರ್ಡ್‌ನ ಮಾರುತಿ ನಗರ ಸ್ಮಶಾನದಲ್ಲಿ ಹೂತು ಹಾಕಿದ ಶವಗಳ ಅವಶೇಷಗಳನ್ನು ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸ್ಮಶಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಳವಾರ ಹನುಮಯ್ಯ ಎಂಬುವವರು ಈ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳೆಂದು ಹೇಳಲಾದ ರಾಜು ಮತ್ತು ಅಫ್ಸರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಶವವೊಂದರ ಎಲುಬು ಹಾಗೂ ದೇಹದ ಇತರ ಭಾಗಗಳನ್ನು ಸಾಗಿಸುತ್ತಿರುವುದನ್ನು ಗಮನಿಸಿದ್ದಾರೆ. ಈ ಸಂಬಂಧ ಹನುಮಯ್ಯ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನವೋದಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನೆಗೆ ಮೃತದೇಹದ ಭಾಗಗಳನ್ನು ಬಳಸಿಕೊಳ್ಳಲಾಗುತ್ತಿತ್ತೆಂಬ ಶಂಕೆ ವ್ಯಕ್ತವಾಗಿದೆ.
ನಗರದ 13ನೇ ವಾರ್ಡ್‌ನ ಮಾರುತಿ ನಗರ ಸ್ಮಶಾನದಲ್ಲಿ ನಡೆಯುತ್ತಿರುವ ಶವಗಳ ಅವಶೇಷ ಸಾಗಣೆ ಪ್ರಕರಣದ ಕುರಿತು ಬಡಾವಣೆ ಮುಖಂಡ ರವೀಂದ್ರ ಜಲ್ದಾರ ಮಾತನಾಡಿ, ಕಳೆದ ಹಲವು ದಿನಗಳಿಂದ ಸ್ಮಶಾನದಿಂದ ಶವಗಳ ದೇಹದ ಭಾಗಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ದೂರುಗಳಿದ್ದವು. ನಿನ್ನೆ ಸಂಜೆ ಬಡಾವಣೆ ನಿವಾಸಿಗಳು ನೀಡಿದ ಮಾಹಿತಿ ಆಧರಿಸಿ ಪೊಲೀಸರಿಗೆ ವಿಷಯ ತಿಳಿಸಲಾಗಿದೆ ಎಂದು ಹೇಳಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನವೋದಯ ವೈದ್ಯಕೀಯ ಕಾಲೇಜಿನ ಇಬ್ಬರು ಸಿಬ್ಬಂದಿಗಳು ಸಿಕ್ಕಿಬಿದ್ದಿದ್ದಾರೆ. ಸ್ಮಶಾನದ ಕಾವಲುಗಾರನಿಗೆ ಹಣ ನೀಡಿ, ಹೂತು ಹಾಕಿದ ಶವಗಳ ದೇಹದ ಭಾಗಗಳನ್ನು ಪಡೆಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಶವಗಳ ದೇಹದ ಭಾಗಗಳನ್ನು ಅನಧಿಕೃತವಾಗಿ ಪಡೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಕಾನೂನು ಬಾಹಿರವಾಗಿ ಶವಗಳನ್ನು ಪಡೆಯುತ್ತಿರುವ ಗಂಬೀರ ಪ್ರಕರಣವಾಗಿದ್ದರಿಂದ ಕ್ರಮವಾಗಬೇಕೆಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಶೇ. 86.02ರಷ್ಟು ಮತದಾನ
ನೇತಾಜಿ ನಗರ ಠಾಣೆ ಪಿಎಸ್‌ಐ ಪ್ರಕರಣದ ವಿಚಾರಣೆ ಪ್ರಾರಂಭಿಸಿದ್ದಾರೆ.





