ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ ಸೂರ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ.ಬೇಗ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಆಯೋಜಿಸಿರುವ ಸ್ವಾಭಿಮಾನಿ ಕಲ್ಯಾಣ ಪರ್ವದ ರಜತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣ ಕಾರ್ಯಕ್ಕೆ ಸರ್ಕಾರದ ವತಿಯಿಂದ ಅನುದಾನ ಒದಗಿಸಲಾಗಿದೆ. 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಬರೆಸುವ ಮೂಲಕ ಅನುಭವ ಮಂಟಪವನ್ನು ಮಾದರಿ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ. ಅನುಭವ ಮಂಟಪದ ನಿರ್ಮಾಣ ಕಾರ್ಯವನ್ನು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳವರು ಭೇದಭಾವ ಮರೆತು ‘ಇವನಮ್ಮವ’ ಎಂಬ ಭಾವನೆಯೊಂದಿಗೆ ಬದುಕಬೇಕು. ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹಾಗೂ ಪೂಜ್ಯ ಗಂಗಾ ಮಾತಾಜಿ ಒಗ್ಗೂಡಿ ಕಲ್ಯಾಣ ಪರ್ವ ನಡೆಸಿದರೆ ಐಕ್ಯತೆಯ ಸಂದೇಶ ಸಾರಿದಂತಾಗಿದೆ ಎಂದರು.
ಸ್ವಾಭಿಮಾನಿ ಕಲ್ಯಾಣ ಪರ್ವದ ರಜತ ಮಹೋತ್ಸವದ ಅಧ್ಯಕ್ಷತೆ ವಹಿಸಿದ್ದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, “ಬಸವಕಲ್ಯಾಣದ ಪರುಷ ಕಟ್ಟೆ ಇಂದಿಗೂ ಅಭಿವೃದ್ಧಿ ಕಾಣದಿರುವುದು ದುರ್ದೈವದ ಸಂಗತಿ. ಈ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಜಾಗತಿಕ ಮಟ್ಟದಲ್ಲಿ ಗುರುಬಸವಣ್ಣನವರ ‘ಇವನಮ್ಮವ’ ಸಂದೇಶವನ್ನು ಸಾರಬೇಕಿದೆ. ಈ ಸಂದೇಶವನ್ನು ಪಾಲಿಸದಿದ್ದರೆ ಬಸವತತ್ವಕ್ಕೆ ಉಳಿಗಾಲವಿಲ್ಲ. ವೈಯಕ್ತಿಕ ಸ್ವಾರ್ಥ ಮತ್ತು ಹಿತಾಸಕ್ತಿಗಳನ್ನು ಬದಿಗಿಟ್ಟು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡಬೇಕು. ಮಾತಾಜಿಯವರ ಶ್ರಮ ವ್ಯರ್ಥವಾಗದಂತೆ ಅವರ ನಿಜಾನುಯಾಯಿಗಳು ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ಮಾತನಾಡಿ, “ಮಾತೆ ಮಹಾದೇವಿಯವರಂತಹ ಧರ್ಮಪ್ರಚಾರಕರು ಅಪರೂಪ. ಬಸವಣ್ಣನವರ ವಚನಗಳನ್ನು ಮನೆಮನೆಗೆ ತಲುಪಿಸಿದ ಕ್ರಾಂತಿಕಾರಿ ಚೇತನ ಅವರಾಗಿದ್ದರು. ಅವರು ಕಟ್ಟಿದ ಸಂಸ್ಥೆಯಲ್ಲಿ ಇಂದು ಸ್ವಾರ್ಥಪರರು ತುಂಬಿಕೊಂಡು ಅದನ್ನು ಹಾಳುಗೆಡವುತ್ತಿರುವುದು ಶೋಚನೀಯ” ಎಂದು ಅಭಿಪ್ರಾಯಪಟ್ಟರು.
ಬಸವಕಲ್ಯಾಣದ ಬಸವ ಮಹಾಮನೆಯ ಪೂಜ್ಯ ಡಾ.ಸಿದ್ಧರಾಮ ಬೆಲ್ದಾಳ ಶರಣರು ದಿವ್ಯ ಸಾನಿಧ್ಯ ವಹಿಸಿ ಸಾಮೂಹಿಕ ಪ್ರಾರ್ಥನೆ ಕೃತಿಯನ್ನು ಬಿಡುಗಡೆಗೊಳಿಸಿದರು. ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಶ್ರೀಕಾಂತ ಸ್ವಾಮಿ ಮಾತನಾಡಿ, “ಮಾತೆ ಮಹಾದೇವಿಯವರು ಆರಂಭಿಸಿದ ಸ್ವತಂತ್ರ ಧರ್ಮದ ಹೋರಾಟ ಮುಂದುವರಿಯಬೇಕು. ಹಲವು ಮಠಾಧೀಶರು ಮಾಡದ ಕಾರ್ಯವನ್ನು ಇಂದು ಕ್ರಿಯಾಮೂರ್ತಿಗಳು ಮಾಡುತ್ತಿದ್ದಾರೆ. ಅಂತಹ ಕ್ರಿಯಾಮೂರ್ತಿಗಳನ್ನು ಮಾತಾಜಿಯವರು ರೂಪಿಸಿ ಹೋಗಿದ್ದಾರೆ. ಮಾತಾಜಿಯವರು ಸಂಪಾದಿಸಿದ ಭೌತಿಕ ಆಸ್ತಿ ಚನ್ನಬಸವಾನಂದ ಸ್ವಾಮೀಜಿಯವರಿಗೆ ಸಿಗದೇ ಇರಬಹುದು. ಆದರೆ ಅವರ ಆಶೀರ್ವಾದವೆಂಬ ಸಂಪತ್ತು ಸದಾ ಸ್ವಾಮೀಜಿಯವರೊಂದಿಗಿದೆ” ಎಂದರು.
ಧಾರವಾಡದ ಅಬ್ದುಲ್ ರಜಾಕ್ ಖಾದ್ರಿ ಸತ್ತೂರು ಅವರು ‘ವಚನ ಚಿಂತನೆ’ ದಿನಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಚಿತ್ರದುರ್ಗದ ತರಂಗಿಣಿ ಅವರ ನೃತ್ಯ ಪ್ರದರ್ಶನ ಸಭಿಕರ ಗಮನ ಸೆಳೆಯಿತು.
ಇದನ್ನೂ ಓದಿ : ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ
ವೇದಿಕೆಯಲ್ಲಿ ಚಿಕ್ಕಮಗಳೂರಿನ ಡಾ.ಜಯಬಸವಾನಂದ ಸ್ವಾಮೀಜಿ, ಆಂಧ್ರಪ್ರದೇಶದ ಬಸವೇಶ್ವರ ಸ್ವಾಮೀಜಿ, ಗುರುಸ್ವಾಮಿಗಳು, ಸತ್ಯಾದೇವಿ ಮಾತಾಜಿ, ಶಾಂತಾದೇವಿ ಮಾತಾಜಿ, ವಚನಶ್ರೀ ಮಾತಾಜಿ, ಬಸವರಾಜ ಪಾಟೀಲ ಶಿವಪುರ, ಭೀಮರಾವ ಬಿರಾದಾರ, ಮಧು ಇಟಕ್ಯ ಳ, ಡಾ.ಮಹೇಶ ಬಿರಾದಾರ ಹಾಗೂ ಬೆಳಗಾವಿಯ ಅಶೋಕ ಬೆಂಡಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವರಾಜ ಪಾಟೀಲ ಶಿವಪುರ ಸ್ವಾಗತಿಸಿದರು. ಬಸವರಾಜ ಸಂಗಮ ನಿರೂಪಿಸಿದರು. ಪ್ರಾರ್ಥನಾ ಚಟನಳ್ಳಿ ವಂದಿಸಿದರು.





