ಸಂವಿಧಾನ ಕೇವಲ ಪುಸ್ತಕವಲ್ಲ, ಬದುಕಿನ ಭಾಗವಾಗಿದೆ. ಜಾತ್ಯತೀತೆಯ ಪ್ರಜಾಪ್ರಭುತ್ವವನ್ನು ಈ ನಾಡಿಗೆ ನೀಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಬಾಗಡೆ ಹೇಳಿದರು.
ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
“ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಭಜನೆಯದಾಗ ಭಾರತ ಮಾತ್ರ ಜಾತ್ಯತೀತೆ ಪ್ರಜಾಪ್ರಭುತ್ವ ಒಳಗೊಂಡ ದೇಶ ಅಸ್ತಿತ್ವ ಪಡೆಯಿತು. ವಿಶಾಲವಾದ ಸಂವಿಧಾನವನ್ನು ಡಾ.ಬಿ ಆರ್ ಅಂಬೇಡ್ಕರ್ ನೇತೃತ್ವದ ಸಮಿತಿ ನೀಡಿದೆ. ಸಮಾನ ಅವಕಾಶ, ಮೂಲಭೂತ ಹಕ್ಕು ಸೇರಿದಂತೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಅಂಶಗಳನ್ನು ಹೊಂದಿದೆ. ಸಂವಿಧಾನ ಏಕಾಏಕಿ ಅರ್ಥವಾಗುವುದಿಲ್ಲ. ಸಂವಿಧಾನವನ್ನೂ ಮೂರು ಭಾಗವಾಗಿ ವಿಂಗಡಿಸಿ ಅಧ್ಯಯನ ಮಾಡಬೇಕಿದೆ” ಎಂದು ಹೇಳಿದರು.
“395 ಅನುಚ್ಚೇದಗಳು, 28 ಭಾಗಗಳು, 12 ಅಧಿಸೂಚನೆಗಳನ್ನು ಒಳಗೊಂಡಿದೆ. ವಿಸ್ತೃತ, ವಿಶಾಲತೆ ತಳಹದಿಯಲ್ಲಿ ರೂಪಿತಗೊಂಡ ಸಂವಿಧಾನ ಅರ್ಥೈಸುವುದು ಸುಲಭವಲ್ಲ. ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಸಂವಿಧಾನ ಪಾಲನೆ ನಮ್ಮೆಲ್ಲರ ಜವಬ್ದಾರಿಯಾಗಿದೆ. ಸಂವಿಧಾನ ಅಶಯಗಳನ್ನು ಸಾಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕರ್ನಾಟಕ ಒನ್ ಕೇಂದ್ರದಲ್ಲಿ ಸೌಲಭ್ಯ ಕುಂಠಿತ; ವಿಶಿಷ್ಟ ಪ್ರತಿಭಟನೆ ನಡೆಸಿದ ಸಾಮಾಜಿಕ ಕಾರ್ಯಕರ್ತ
ವೇದಿಕೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶ ಜಗದೀಶ್ವರ, ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಹತ್ತಿಕಾಳ ಪ್ರಭು ಸಿದ್ದಪ್ಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ನ್ಯಾಯಾದೀಶ ದಯಾನಂದ ಬೆಲೂರೆ, ವಿಶ್ರಾಂತ ಉಪ ಕುಲಪತಿ ಜೆ ಎಸ್ ಪಾಟೀಲ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್ ಭಾನುರಾಜ, ಸಂಘದ ಕಾರ್ಯದರ್ಶಿ ಉದಯಕುಮಾರ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಹಿರಿಯ, ಕಿರಿಯ ನ್ಯಾಯವಾದಿಗಳು, ಹಿರಿಯ ನ್ಯಾಯವಾದಿ ಎಸ್ ಬಿ ಪಾಟೀಲ್, ನಿಜಾನಂದ ಪಾಟೀಲ್, ನೂರ್ ಮೊಹ್ಮದ ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ